ವಿನಯ್ ರಾಜ್‌ಕುಮಾರ್ ಹಾಗೂ ಮೊನಿಷಾ ನಟನೆಯ 'ಸಿಟಿಲೈಟ್ಸ್' ಸಿನಿಮಾ ಎರಡನೇ ವಾರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡದೇ ಇದ್ದರೂ ಹಿಟ್ ಲಿಸ್ಟ್ ಸೇರಿದೆ. ಮುಖ್ಯವಾಗಿ ಸಿನಿಮಾ ನೋಡಿದವರೆಲ್ಲಾ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಮೂಲಕ ನಿರ್ದೇಶಕರಾಗಿ ದುನಿಯಾ ವಿಜಯ್ ಹ್ಯಾಟ್ರಿಕ್ ಗೆಲುವು ಸಾಧಿಸಿದಂತಾಗಿದೆ.

'ಸಿಟಿಲೈಟ್ಸ್' ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡ ತೇಲುತ್ತಿದೆ. ಕೆಲ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಜನರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿಯನ್ನ ಹಮ್ಮಿಕೊಂಡಿತ್ತು .. ಇಡೀ ತಂಡ ಮಾತನಾಡಿ ಹ್ಯಾಟ್ರಿಕ್‌ ಹಿಟ್‌ ಕೊಟ್ಟಿರೋ ದುನಿಯಾ ವಿಜಯ್‌ ಅವರಿಗೆ ಅಭಿನಂದನೆ ತಿಳಿಸಿದೆ. ಈ ಹಿಂದೆ 'ಸಲಗ' ಹಾಗೂ 'ಭೀಮ' ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿ ವಿಜಯ್ ಸಕ್ಸಸ್ ಕಂಡಿದ್ದರು. ಈ ಬಾರಿ ನಟಿಸದೇ ಬರೀ ನಿರ್ದೇಶಕರಾಗಿ ಗಮನ ಸೆಳೆದಿದ್ದಾರೆ. ಇನ್ನು ವಿಜಯ್ ಮಗಳು ಮೊನಿಷಾ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದ್ದಾರೆ.

ಚಿತ್ರತಂಡ ಖುಷ್

ಸುದ್ದಿಗೋಷ್ಠಿಯಲ್ಲಿ ವಿನಯ್‌ ಮಾತನಾಡಿ "ನನಗಿಂತ ಹೆಚ್ಚು ನಂಬಿಕೆ ನನ್ನಮೇಲಿಟ್ಟ ನಮ್ಮ ಡೈರೆಕ್ಟರ್‌ ವಿಜಿ ಸರ್‌ಗೆ ತುಂಬಾ ಥ್ಯಾಂಕ್ಯ್‌.. ಯಾವಾಗಲು ನಮ್ಮ ಅಭಿಮಾನಿಗಳು ನನ್ನ ಮೇಲೆ ನಂಬಿಕೆ ಇಟ್ಟಿದ್ರು ಈಗ ಅವ್ರ ಕಣ್ಣಲ್ಲಿ ಹೆಮ್ಮೆ ನೋಡಿದಕ್ಕೆ ಖುಷಿ ಆಗ್ತಿದೆ. ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ ಪ್ರತಿ ಪಾತ್ರವನ್ನ ಇಷ್ಟಪಟ್ಟಿದ್ದು ಗೊತ್ತಾಯ್ತು. ಇದು ಇಡೀ ತಂಡದ ಗೆಲುವು ಎಂದರು. ನಟಿ ಮೋನಿಷಾ ಮಾತನಾಡಿ "ನನ್ನ ಅಪ್ಪ ಎಂದಿಗೂ ನನ್ನ ಅಭಿನಯ ಚೆನ್ನಾಗಿದೆ ಅಂತ ಹೇಳಲೇ ಇಲ್ಲ. ಹಿಟ್‌ ಸಿನಿಮಾಗಳನ್ನ ನೀಡಿ ಸಕ್ಸಸ್‌ ಆಗಿದ್ದಾಗ ನನಗೋಸ್ಕರ ಸಿನಿಮಾ ನಿರ್ದೇಶನ ಮಾಡಿದ್ರು ಥ್ಯಾಂಕ್ಯೂ ಅಪ್ಪ, ಎಂದು ಭಾವುಕರಾದರು.

ವಿಜಯ್ ಧನ್ಯವಾದ

'ದುನಿಯಾ' ಸಿನಿಮಾ ಮಾಡಿದಾಗ ನಾನು ಯಾರು ಅಂತ ನೋಡದೆ ಜನರು ದೇವರಾಗಿ ಬಂದು ಕೈ ಹಿಡಿದು ನಡೆಸಿಕೊಂಡು ಹೋದ್ರಿ.. ಈಗ ನನ್ನ ಮಕ್ಕಳಿಗೂ ಅದೇ ಆಶೀರ್ವಾದ ಮಾಡಿದ್ದೀರ.. ದೊಡ್ಮನೆಯಿಂದ ವಿನಯ್‌ ಕರ್ಕೊಂಡು ಬಂದಾಗ ಭಯ ಇತ್ತು … ಈ ಸಾರಿ ಎಲ್ಲಾ ಹೀರೋ ಅಭಿಮಾನಿಗಳು 'ಸಿಟಿಲೈಟ್ಸ್‌' ಸಿನಿಮಾ ನೋಡಿ ವಿನಯ್‌ ಹಾಗೂ ಮೋನಿಷಾಗೆ ಆಶೀರ್ವಾದ ಮಾಡಿದ್ದಾರೆ ಥ್ಯಾಂಕ್ಯೂ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

10 ದಿನಗಳ ಕಲೆಕ್ಷನ್

ಅಂದಾಜು 3.75 ಕೋಟಿ ರೂ. ಬಜೆಟ್‌ನಲ್ಲಿ 'ಸಿಟಿಲೈಟ್ಸ್' ಸಿನಿಮಾ ನಿರ್ಮಾಣವಾಗಿತ್ತು. ಹೆಚ್ಚು ಸೆಟ್ ಇಲ್ಲದೇ ನೈಜ ಪ್ರದೇಶಗಳಲ್ಲೇ ಚಿತ್ರೀಕರಣ ಮಾಡಿದ್ದರು. ಗಟ್ಟಿ ಕಥೆ ಎನ್ನುವುದು ಇಲ್ಲದೇ ಇದ್ದರೂ ಸನ್ನಿವೇಶಗಳನ್ನು ಒಂದಕ್ಕೊಂದು ಸೇರಿ ಬೆಂಗಳೂರಿನಲ್ಲಿ ಕೆಲವರ ರಾತ್ರಿ ಜೀವನವನ್ನು ವಿಜಯ್ ತೆರೆಗೆ ತಂದಿದ್ದಾರೆ. ಸಾಕಷ್ಟು ಸಂದೇಶ ಕೂಡ ಚಿತ್ರದಲ್ಲಿದೆ. 10 ದಿನಕ್ಕೆ ಚಿತ್ರದ 7.61 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.