ದುನಿಯಾ ಸೂರಿ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ ದುನಿಯಾ ವಿಜಿ ಅವರದ್ದೇ ಶೈಲಿಯಲ್ಲಿ ಸಿನಿಮಾಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡ್ತಾ ಬರ್ತಿದ್ದಾರೆ. ಅದರಲ್ಲಿ ಭಾಗಶಃ ಯಶಸ್ಸು ಕಂಡಿದ್ದಾರೆ. 'ಸಲಗ', 'ಭೀಮ' ಬಳಿಕ ವಿಜಯ್ ನಿರ್ದೇಶನದ ಮೂರನೇ ಸಿನಿಮಾ 'ಸಿಟಿಲೈಟ್ಸ್'. ಈ ಬಾರಿ ನಟನೆ ಬಿಟ್ಟು ಕ್ಯಾಮರಾ ಹಿಂದೆ ನಿಂತು ಬೆಂಗಳೂರಿನ ಕರಾಳ ಮುಖಗಳನ್ನು ಪರಿಚಯಿಸುವ ಪ್ರಯತ್ನ ಮಾಡಿಸಿದ್ದಾರೆ.
ಕಥೆಯಲ್ಲಿ ಆಳ ಇಲ್ಲದೇ ಇದ್ದರೂ ಚಿತ್ರಕಥೆಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ವಿಷಯಗಳ ಬಗ್ಗೆ ಚಿತ್ರದಲ್ಲಿ ಚರ್ಚೆ ಮಾಡಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಹಿಂದಿನ ಎರಡೂ ಸಿನಿಮಾಗಳಿಗಿಂತ 'ಸಿಟಿಲೈಟ್ಸ್' ಬೇರೆ ರೀತಿಯಿದೆ. ಆದರೆ ಕಥೆ ಹೇಳುವ ಶೈಲಿ ಪುನರಾವರ್ತನೆಯಾಗಿದೆ. ಅಷ್ಟಕ್ಕೂ 'ಸಿಟಿಲೈಟ್ಸ್' ಕಥೆ ಏನು ? ಪ್ಲಸ್ ಏನು ? ಮೈನಸ್ ಏನು ? ಮುಂದೆ ಓದಿ.
'ಸಿಟಿಲೈಟ್ಸ್' ಕಥೆ
ನಗರದ ಒಬ್ಬ ಎಂಎಲ್‌ಎ. ಅವನ ಬಲಗೈ ಭಂಟ ಪುನೀತ್. ಕಸ ವಿಲೇವಾರಿ ಮಾಫಿಯಾದಿಂದ ಹಿಡಿದು ಮೆಜೆಸ್ಟಿಕ್ ಸುತ್ತಮುತ್ತಲ ಭಾಗದ ಎಲ್ಲಾ ಅಕ್ರಮ ವ್ಯವಹಾರಗಳಿಂದ ಅವನಿಗೆ ಕಮೀಷನ್ ಬರಬೇಕು. ಅದಕ್ಕೊಂದು ರೌಡಿ ಪಡೆ ಕಟ್ಟಿಕೊಂಡಿರುತ್ತಾನೆ. ತನ್ನವರನ್ನೆಲ್ಲಾ ಕಳೆದುಕೊಂಡು ಮಾದೇಶ್ವರ ಬೆಟ್ಟದ ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ಶಿವ(ವಿನಯ್ ರಾಜ್‌ಕುಮಾರ್). ಮತ್ತೊಂದು ಕಡೆ ತಮ್ಮನನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುವ ಸಕಲೇಶಪುರ ಮೂಲಕ ಯುವತಿ ಮೋನಿಷಾ. ಇವರಿಬ್ಬರು ಆ ಎಂಎಲ್‌ಎ ಹಾಗೂ ಆತನ ಭಂಟನನ್ನು ಎದುರು ಹಾಕಿಕೊಳ್ಳುತ್ತಾರೆ. ಮುಂದೇನು ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ ?
ಬರವಣಿಗೆಗೆ ಹೆಚ್ಚಿನ ಮಹತ್ವ ಈ ಚಿತ್ರದಲ್ಲಿ ಸಿಕ್ಕಿದೆ. ಮೆಜೆಸ್ಟಿಕ್ ಸುತ್ತಾ ಮುತ್ತಾ ರಾತ್ರಿ ಜೀವನ ಹೇಗಿರುತ್ತೆ ? ಲೈಟ್ಸ್ ಬೆಳಕಿನಲ್ಲಿ ನಡೆಯುವ ಅನಾಚಾರ ಅಕ್ರಮಗಳು ಏನು ಎನ್ನುವುದನ್ನು ಒಂದೊಂದಾಗಿ ಹೇಳುತ್ತಾ ಹೋಗುತ್ತಾರೆ. ಫಸ್ಟ್ ಹಾಫ್ ಇಂಟ್ರೆಸ್ಟಿಂಗ್ ಎನಿಸುತ್ತದೆ. ಇಷ್ಟು ಬೇಗ ಇಂಟರ್‌ವಲ್ ಬಂದುಬಿಡ್ತಾ ಎನಿಸುವಂತಿದೆ. ಒಂದಷ್ಟು ಬೇಡದ ದೃಶ್ಯಗಳನ್ನು ತುರುಕಲಾಗಿದೆ. ವಿನಯ್ ರಾಜ್‌ಕುಮಾರ್ ಪಾತ್ರವನ್ನು ಬಹಳ ಸಿಂಪಲ್ ಆಗಿ ಪರಿಚಯಿಸುತ್ತಾರೆ. ಹಳ್ಳಿಯ ಮುದ್ಧ ಯುವಕನಾಗಿ ಹೋಟೆಲ್ ಕ್ಲೀನರ್ ಆಗಿ ಅನ್ಯಾಯದ ವಿರುದ್ಧ ಹೋರಾಡುವ ನಾಯಕನಾಗಿ ತೋರಿಸಿದ್ದಾರೆ.
'ಸಲಗ' ಚಿತ್ರದಲ್ಲಿ ರೌಡಿಸಂ, ಪೊಲೀಸ್ ಇಲಾಖೆ ಬಗ್ಗೆ ಕಥೆ ಹೇಳಿದ್ದ ದುನಿಯಾ ವಿಜಯ್ 'ಭೀಮ' ಚಿತ್ರದಲ್ಲಿ ನಗರದಲ್ಲಿ ಪುಡಿ ರೌಡಿಗಳ ಉಪಟಳ ಜೊತೆ ಡ್ರಗ್ಸ್ ಧಂದೆಯ ಪರಿಣಾಮಗಳ ಚರ್ಚಿಸಿದ್ದರು. ಆದರೆ 'ಸಿಟಿಲೈಟ್ಸ್' ಚಿತ್ರದಲ್ಲಿ ವೇಶ್ಯಾವಾಟಿಕೆ ಧಂದೆಯನ್ನು ಕೇಂದ್ರವಾಗಿಟ್ಟುಕೊಂಡಿದ್ದಾರೆ. ಮೋಸದಿಂದ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಡುವ ಹೆಣ್ಣುಮಕ್ಕಳು, ಅಲ್ಲಿಂದ ಹೊರಬರಲಾಗದೇ ಎದುರಿಸುವ ನರಕಯಾತನೆ, ಹೊರ ಬಂದರೂ ಅವರನ್ನು ಸಮಾಜ ಹೇಗೆ ನೋಡುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ.
ವೇಶ್ಯಾವಾಟಿಕೆ ಜೊತೆಗೆ ಸಮಾಜದಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ವ್ಯಕ್ತಿಗಳಿಗೆ ಸಮಾನ ಗೌರವ ಸಿಗಬೇಕು, ಹೆಚ್‌ಐವಿ ಅಂಟು ರೋಗ ಅಲ್ಲ, ಹೆಣ್ಣು ಮಕ್ಕಳನ್ನು ಉಳಿಸಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ಇತ್ತೀಚೆಗೆ ವರದಿ ಆಗುತ್ತಿರುವ ಪೊಲೀಸ್ ಠಾಣೆಗಳಲ್ಲಿ ನಡೆಯುವ ಲವ್ ಸ್ಟೋರಿಗಳ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಗರದಲ್ಲಿ ಬದುಕು ಕಟ್ಟಿಕೊಡಲು ಬರುವ ಯುವಕ- ಯುವತಿಯರು ಎದುರಿಸುವ ಹೋರಾಟ ಎಂಥದ್ದು ಎನ್ನುವುದನ್ನು ತೆರೆಗೆ ತರಲಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಒಂದಷ್ಟು ಮಾಸ್ ಅಂಶಗಳು ಇದ್ದರೂ ಮೈನಸ್ ಪಾಯಿಂಟ್ಸ್ ಕೂಡ ಇದೆ. ಅದೆಲ್ಲವನ್ನು ಕ್ಲೈಮ್ಯಾಕ್ಸ್ ಫೈಟ್ ಮೂಲಕ ದುನಿಯಾ ವಿಜಯ್ ಮರೆಸಿಬಿಡ್ತಾರೆ.
ಕಲಾವಿದರ ನಟನೆ
ವಿನಯ್ ಕ್ಲಾಸ್ ಪಾತ್ರಗಳಿಗೆ ಸೂಕ್ತ. ಮಾಸ್ ಸಿನಿಮಾಗಳಿಲ್ಲ ಅಲ್ಲ ಎನ್ನುವುದನ್ನು ಅವರು ಮತ್ತೊಮ್ಮೆ ಸುಳ್ಳು ಮಾಡಿದ್ದಾರೆ. 'ಪೆಪೆ', 'ಗ್ರಾಮಾಯಣ' ಸಿನಿಮಾಗಳ ನಂತರ ಮತ್ತೊಮ್ಮೆ ರಗಡ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಕೊಂಚ ಹೆಚ್ಚೇ ಅಂಕ ಗಿಟ್ಟಿಸಿದ್ದಾರೆ. ವಿನಯ್ ಸ್ಟ್ರಾಂಗ್ ಸ್ಕ್ರೀನ್ ಪ್ರೆಸೆನ್ಸ್ ಹೈಲೆಟ್ ಎನ್ನಬಹುದು. ದುನಿಯಾ ವಿಜಯ್ ಮಗಳು ಮೋನಿಷಾ ಕೂಡ ಸಿಕ್ಕ ಅವಕಾಶವನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಸಿಂಪಲ್ ಹುಡುಗಿಯಾಗಿ ಇಷ್ಟವಾಗುತ್ತಾರೆ.
ಅಮ್ಮಾಜಿ ಆಗಿ ಪವರ್‌ಫುಲ್ ಪಾತ್ರದಲ್ಲಿ ಉಮಾಶ್ರೀ ಇಷ್ಟವಾಗುತ್ತಾರೆ. ಇನ್ನುಳಿದಂತೆ ನೆಗೆಟಿವ್ ರೋಲ್‌ನಲ್ಲಿ ಪುನೀತ್ ಹೆಚ್ಚು ಅವಕಾಶ ಗಿಟ್ಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಒಂದೇ ಒಂದು ದೃಶ್ಯಕ್ಕೆ ಸೀಮಿತವಾಗಿದ್ದಾರೆ. ಕಥೆಗೆ ತಕ್ಕಂತೆ ರೌಡಿಸಂ ಭಾಷೆ ಬಳಸಿ ಸೊಗಸಾದ ಸಂಭಾಷಣೆ ಬರೆದಿರುವ ಮಾಸ್ತಿ ಒಂದು ನಿಮಿಷದ ಸನ್ನಿವೇಷದಲ್ಲಿ ಬಂದು ಹೋಗುತ್ತಾರೆ.
ತಾಂತ್ರಿಕವಾಗಿ ಸಿನಿಮಾ
ಶಿವಸೇನಾ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಚಿತ್ರದ ಜೀವಾಳ. ದುನಿಯಾ ವಿಜಯ್ ಕಲ್ಪನೆಗೆ ತಕ್ಕಂತೆ ಅವರಿಬ್ಬರು ಸಾಥ್ ನೀಡುತ್ತಾ ಸಾಗಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತಾ ಗಲ್ಲಿ ಗಲ್ಲಿಗಳಲ್ಲಿ ಕ್ಯಾಮರಾ ತಿರುಗಿಸಿ ದೃಶ್ಯಗಳನ್ನು ಸೆರೆಹಿಡಿದಿರುವುದು ಹೊಸದಾಗಿದೆ. ಇಡೀ ಚಿತ್ರವನ್ನು ತಮ್ಮ ಸಂಗೀತದಿಂದಲೇ ಮೇಲೆತ್ತಿದ್ದಾರೆ ಚರಣ್ ರಾಜ್. ಸಾಮಾನ್ಯ ಪ್ರೇಕ್ಷಕರಿಗೆ ಕೆಲ ಡೈಲಾಗ್ಸ್, ಮ್ಯೂಸಿಕ್, ಬಳಸಿರುವ ಪದಗಳು, ಒಂದೆರಡು ಹಾಡು ಕರ್ಕಶ, ವಿಚಿತ್ರ ಅನ್ನಿಸಬಹುದು. ಆದರೆ ಚಿತ್ರಕಥೆಗೆ ಅದು ಪೂರಕವಾಗಿದೆ.
ಮೈನಸ್ ಅಂಶಗಳು
ಅಣ್ಣಾವ್ರ ಮೊಮ್ಮಗನನ್ನು ಪರಿಚಯಿಸೋಕೆ ವೈನ್ ಶಾಪ್‌ನಲ್ಲಿ ಕುಡಿಯುವ ಸನ್ನಿವೇಶವೇ ಬೇಕಿರಲಿಲ್ಲ. ಸಾಕಷ್ಟು ಒಳ್ಳೆ ವಿಷಯಗಳ ಜೊತೆಗೆ 'ಸಿಟಿಲೈಟ್ಸ್' ಚಿತ್ರದಲ್ಲಿ ಒಂದಷ್ಟು ಮೈನಸ್ ಅಂಶಗಳು ಇವೆ. ಮುಖ್ಯವಾಗಿ ಪೊಲೀಸ್ ಇಲಾಖೆಯನ್ನು ತೋರಿಸಿರುವ ಪರಿ, ಕಾನ್ಸ್‌ಸ್ಟೇಬಲ್ ಹಾಗೂ ಲೇಡಿ ಕಾನ್ಸ್‌ಸ್ಟೇಬಲ್ ನಡುವಿನ ಲವ್ವಿಡವ್ವಿ ಸನ್ನಿವೇಶಗಳು ಬೇಸರ ಮೂಡಿಸುತ್ತದೆ.
ಲಾಸ್ಟ್ ಪಂಚ್: ಮಲ್ಟಿಪ್ಲೆಕ್ಸ್ ಆಡಿಯನ್ಸ್‌ಗೆ ಅಲ್ಲ.. ಮಾಸ್ ಆಡಿಯನ್ಸ್‌ಗೆ ಮಾತ್ರ..
ರೇಟಿಂಗ್: 2.5/5