ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ನಟನೆಯ 'ಸಿಟಿಲೈಟ್ಸ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡ್ತಿದೆ. ಬೆಂಗಳೂರಿನ ಕತ್ತಲಲೋಕದ ಕಥೆಯನ್ನು ಎಳೆಎಳೆಯಾಗಿ ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡ್ತಿದ್ದಾರೆ. ಬರೀ ರೌಡಿಸಂ, ಸ್ಮಗ್ಲಿಂಗ್ ಮಾತ್ರವಲ್ಲ.. ವೇಶ್ಯಾವಾಟಿಕೆ ದಂಧೆಯ ಕಥೆ ಚಿತ್ರದಲ್ಲಿರುವುದು ಗೊತ್ತಾಗ್ತಿದೆ.

ಇಲ್ಲಿ ಕೂಡ ಹಳ್ಳಿಬಿಟ್ಟು ಬೆಂಗಳೂರಿಗೆ ಬಂದ ಯುವಕನ ಕಥೆ ಇದೆ. ಜೊತೆಗೆ ಒಬ್ಬ ಯುವತಿಯು ಇದ್ದಾಳೆ. ಇವರಿಬ್ಬರು ಹೊಲಸು ಪಾತಕ ಲೋಕದಲ್ಲಿ ಎದುರಿಸುವ ಹೋರಾಟದ ಕಥೆಯನ್ನು ವಿಜಿ ಕಟ್ಟಿಕೊಡುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಜೊತೆ ವಿಜಯ್ ಪುತ್ರಿ ಮೋನಿಷಾ ನಾಯಕಿಯಾಗಿ ನಟಿಸಿದ್ದಾರೆ. ಉಮಾಶ್ರೀ, ಗೋಪಾಲಕೃಷ್ಣ ದೇಶಪಾಂಡ್, ಪುನೀತ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಟ್ರೈಲರ್ ಭರವಸೆ ಮೂಡಿಸಿದೆ. ಮಾಸ್ತಿ ಖಡಕ್ ಡೈಲಾಗ್ಸ್ ಗಮನ ಸೆಳೆಯುತ್ತಿದೆ.

ಒಂದು ಪಾತ್ರದಲ್ಲೂ ಮಾಸ್ತಿ ನಟಿಸಿದ್ದು ಬೆಂಗಳೂರಿನ ಲೋಕಲ್ ಕನ್ನಡ ಪದಗಳನ್ನು ಬಳಸಿ ಸಂಭಾಷಣೆ ಬರೆದಿದ್ದಾರೆ. ಸಾಕಷ್ಟು ಹಸಿಹಸಿ ಬೈಗುಳದ ಪದಗಳು ಚಿತ್ರದಲ್ಲಿದೆ. "ದರಿದ್ರ ಬಾಡಿಗೆಗೆ ಇದ್ರು ದುರಹಂಕಾರ ಲೀಸ್‌ಗೆ ಹಾಕ್ಕೊಂಡ್ಬಿಟ್ಟಿದ್ದೀರಾ" ಎನ್ನುವ ಡೈಲಾಗ್ ಗಮನ ಸೆಳೆಯುತ್ತದೆ. "ಮಲಗೆದ್ದಿರುವವರಿಗೆಲ್ಲಾ ನೀನೇನ್ ಗುರೂ ಬಾಯ್ ಕೊಟ್ಕೊಂಡು" ಎನ್ನುವ ಸಾಲು ಹೊಸದಾಗಿದೆ. ನೇಗಿಲು ಹಿಡಿಯೋ ಕೈಗೆ ಬ್ಲೇಡ್ ಹಿಡ್ಯೋದು ದೊಡ್ಡ್ ವಿಷ್ಯನೇ ಅಲ್ಲ", "ನಾವ್ ಶುರು ಮಾಡಿ ಸುಮಾರ್ ವರ್ಷಗಳಾಯ್ತು ಕಣೋ.. ಗಾ** " ಎನ್ನುವ ಡೈಲಾಗ್ಸ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ.

ಜಬರ್ದಸ್ತ್ ಆಕ್ಷನ್, ರಾ ಮೇಕಿಂಗ್‌ ಎದ್ದು ಕಾಣ್ತಿದೆ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ನಟನೆ ಬಿಟ್ಟು ಸಂಪೂರ್ಣವಾಗಿ ನಿರ್ದೇಶನಕ್ಕಿಳಿದಿದ್ದಾರೆ. 'ಸಲಗ', 'ಭೀಮ' ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿದ್ದ ಅವರು ಈ ಬಾರಿ ಕ್ಯಾಮರಾ ಹಿಂದೆ ನಿಂತಿದ್ದಾರೆ. ವಿಜಿ- ವಿನಯ್ ಕಾಂಬಿನೇಷನ್ ಕುತೂಹಲ ಹೆಚ್ಚಿಸಿದೆ. ಸ್ಯಾಂಡಲ್‌ವುಡ್ ಮಯೂರ ಎಂದು ಚಿತ್ರತಂಡ ವಿನಯ್ ಅವರಿಗೆ ಹೊಸ ಬಿರುದನ್ನು ಕೊಟ್ಟಿದೆ. ಇದೇ ಶುಕ್ರವಾರ 'ಸಿಟಿಲೈಟ್ಸ್' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದ್ದು ಆಕ್ಷನ್ ಪ್ಯಾಕ್ಡ್ ಟ್ರೈಲರ್ ಬಿಸಿ ಹೆಚ್ಚಿಸಿದೆ.