ಕನ್ನಡ ನಟಿ ರಶ್ಮಿ ಚಿತ್ರರಂಗದಲ್ಲಿ ಮಾತ್ರವಲ್ಲ ಸಿನಿರಸಿಕರ ಮನಸ್ಸಿನಲ್ಲಿ ಕೂಡ ದುನಿಯಾ ರಶ್ಮಿ ಎಂದೇ ಜಾಗ ಮಾಡಿದ್ದಾರೆ. ಸೂರಿ ನಿರ್ದೇಶನದ ದುನಿಯಾ ಬಿಟ್ಟು ಆಕೆ ನಟಿಸಿದ ಬೇರೆ ಯಾವುದೇ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ನಾಯಕಿಯಾಗಿ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದ ಚೆಲುವೆ ಬಳಿಕ ನಿಧಾನವಾಗಿ ಚಿತ್ರರಂಗದಿಂದ ದೂರಾಗಿದ್ದರು.

ಬಿಗ್‌ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಕೂಡ ರಶ್ಮಿ ಕಾಣಿಸಿಕೊಂಡಿದ್ದರು. 2023ರಲ್ಲಿ ಬಂದ 'ರಂಗಿನ ರಾಟೆ' ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. Openbook with Amoolya ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಶ್ಮಿ ಮಾತನಾಡಿದ್ದಾರೆ. ತಮ್ಮ ಸಿನಿಜೀವನದ ಬಗ್ಗೆ ಮೆಲುಕು ಹಾಕಿದ್ದಾರೆ. 'ದುನಿಯಾ' ಚಿತ್ರಕ್ಕೂ ಮುನ್ನ 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ರಶ್ಮಿ ಸಹನಟಿಯಾಗಿ ನಟಿಸಿದ್ದರು. ಅದೇ ಚಿತ್ರದಲ್ಲಿ ದುನಿಯಾ ವಿಜಯ್ ಕೂಡ ಸಣ್ಣದೊಂದು ಪಾತ್ರ ಮಾಡಿದ್ದರು.

'ದುನಿಯಾ' ಚಿತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಸುತ್ತಿದ್ದಾಗ ಸ್ವತಃ ವಿಜಯ್ ಸಲಹೆ ಮೇರೆಗೆ ರಶ್ಮಿ ಆಯ್ಕೆ ಆಗಿದ್ದರು. ಅಂದಹಾಗೆ ದುನಿಯಾ ಚಿತ್ರಕ್ಕೆ ತಾವು ಯಾವುದೇ ಸಂಭಾವನೆ ಪಡೆಯಲಿಲ್ಲ ಎಂದು ರಶ್ಮಿ ಹೇಳಿದ್ದಾರೆ. 'ಕಲ್ಲರಳಿ ಹೂವಾಗಿ' ಚಿತ್ರಕ್ಕಾಗಿ ದಿನಕ್ಕೆ 600 ರೂ. ಸಂಭಾವನೆ ಕೊಟ್ಟಿದ್ದರು. ಅದೇ ನನ್ನ ಮೊದಲ ಸಂಭಾವನೆ ಎಂದಿದ್ದಾರೆ. 'ದುನಿಯಾ' ಬಳಿಕ ಒಳ್ಳೆ ಪಾತ್ರಗಳ ನಿರೀಕ್ಷೆಯಲ್ಲಿದೆ. ಕೆಲ ಸಿನಿಮಾಗಳು ಕಾರಣಾಂತರಗಳಿಂದ ಕೈತಪ್ಪಿ ಹೋದವು ಎಂದಿದ್ದಾರೆ ರಶ್ಮಿ.

ಗಣೇಶ್ ಸರ್ ಜೊತೆ 'ಕೃಷ್ಣ' ಚಿತ್ರದಲ್ಲಿ ನಾನು ನಾಯಕಿಯಾಗಿ ನಟಿಸಬೇಕಿತ್ತು. ಪೂಜಾ ಗಾಂಧಿ ಮಾಡಿದ್ದ ಪಾತ್ರ ನಾನೇ ಮಾಡಬೇಕಿತ್ತು. ಸಂಭಾವನೆ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂತು. ನಾನು ಕೇಳಿದ್ದಷ್ಟು ನಿರ್ಮಾಪಕರು ಕೊಡಲಿಲ್ಲ. ಕೊನೆಗೆ ಚಿತ್ರದ ಹಾಡೊಂದರಲ್ಲಿ ಗಣೇಶ್ ಸರ್ ಜೊತೆ ಹೆಜ್ಜೆ ಹಾಕಿದ್ದೆ. ಅದೇ ರೀತಿ ಸುದೀಪ್ ಸರ್ ಜೊತೆ ಒಂದು ಸಿನಿಮಾ ಮಾಡಬೇಕಿತ್ತು. ಅದು ಕೂಡ ಮಿಸ್ ಆಗಿತ್ತು ಎಂದು ರಶ್ಮಿ ವಿವರಿಸಿದ್ದಾರೆ.