ದುನಿಯಾ ಸೂರಿ ನಿರ್ದೇಶನದ 'ಕಾಗೆ ಬಂಗಾರ' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸೂರಿ ಈಸ್ ಬ್ಯಾಕ್, ಸಿನಿಮಾ ಹಿಟ್ ಆಗೋದು ಗ್ಯಾರಂಟಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸುಕ್ಕಾ ಸೂರಿ ರಾ ಟೇಕಿಂಗ್, ರಗಡ್ ಮೇಕಿಂಗ್ ನೋಡಿ ಫಿದಾ ಆಗಿದ್ದಾರೆ. ಆದರೆ 'ಕಾಗೆ ಬಂಗಾರ' ನಾನು ಮಾಡ್ಬೇಕು ಎಂದು ದುನಿಯಾ ವಿಜಯ್ ಪಟ್ಟು ಹಿಡಿದಿದ್ದು ಗೊತ್ತಾ ?

'ಕಾಗೆ ಬಂಗಾರ' ಚಿತ್ರದ ಸಣ್ಣ ಭಾಗ 'ಕೆಂಡಸಂಪಿಗೆ' ಸಿನಿಮಾ 11 ವರ್ಷಗಳ ಹಿಂದೆ ಬಂದಿತ್ತು. ವಿಕ್ಕಿ ಹಾಗೂ ಮಾನ್ವಿತಾ ಕಾಮತ್ ನಾಯಕ-ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಸಿನಿಮಾ ಕಲ್ಟ್ ಹಿಟ್ ಎನಿಸಿಕೊಂಡಿತ್ತು. ಅದರ ಬೆನ್ನಲ್ಲೇ 'ಕಾಗೆ ಬಂಗಾರ' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅಂದುಕೊಂಡ ಸಮಯಕ್ಕೆ ಸಿನಿಮಾ ಶುರುವಾಗಲೇ ಇಲ್ಲ. ದಶಕದ ಬಳಿಕ ಸಿನಿಮಾ ಸೆಟ್ಟೇರಿ ಚಿತ್ರೀಕರಣದ ಹಂತದಲ್ಲಿದೆ.

'ದುನಿಯಾ' ಹಾಗೂ 'ಜಂಗ್ಲಿ' ಚಿತ್ರಗಳಲ್ಲಿ ಸೂರಿ ಹಾಗೂ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ 'ಕೆಂಡಸಂಪಿಗೆ' ಚಿತ್ರದಲ್ಲಿ ನನಗ್ಯಾಕೆ ಅವಕಾಶ ಕೊಟ್ಟಿಲ್ಲ ಎಂದು ಸೂರಿ ಎದುರು ವಿಜಯ್ ಕ್ಯಾತೆ ತೆಗೆದಿದ್ದರು. 'ಕೆಂಡಸಂಪಿಗೆ' ಚಿತ್ರದ ಪ್ರಚಾರದ ಪ್ರಚಾರಕ್ಕಾಗಿ ವಿಜಯ್ ಅವರನ್ನು ಮಾತನಾಡಿಸಿದ್ದಾಗ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಸದ್ಯ ಆ ವೀಡಿಯೋ ಈಗ ಮತ್ತೆ ವೈರಲ್ ಆಗ್ತಿದೆ.

ನನಗೆ ಮಾಡ್ದೆ ಬೇರೆಯವರಿಗೆ ಹೆಂಗೆ ಸಿನಿಮಾ ಮಾಡ್ತೀಯಾ? ಎಂದು ಸೂರಿ ಬಳಿ ವಿಜಯ್ ಕೇಳಿದ್ದರು. ಮುಂದೆ 'ಕಾಗೆ ಬಂಗಾರ' ಸಿನಿಮಾ ನನಗೆ ಮಾಡ್ಬೇಕು. ನಾನೇ ಕಾಗೆ ನಾನೇ ಬಂಗಾರ.. ನನಗೆ ಮಾಡ್ದೆ ಬೇರೆಯವರಿಗೆ ಹೇಗೆ ಮಾಡ್ತೀಯಾ ಎಂದು ವಿಜಯ್ ಪ್ರೀತಿಯಿಂದ ದಬಾಯಿಸಿದ್ದರು. ಕೊನೆಗೆ 'ಕೆಂಡಸಂಪಿಗೆ' ಚಿತ್ರಕ್ಕೆ ಶುಭ ಹಾರೈಸಿದ್ದರು. ಒಟ್ಟಾರೆ ವಿಜಯ್ 'ಕೆಂಡಸಂಪಿಗೆ' ಸಿನಿಮಾ ಬಗ್ಗೆ ಅಸೂಯೆ ಪಟ್ಟಿದ್ದರು. ಮತ್ತೆ ಸೂರಿ ಜೊತೆ ಕೆಲಸ ಮಾಡಲು ಬಯಸಿದ್ದರು. ಈಗ 'ಕಾಗೆ ಬಂಗಾರ' ಚಿತ್ರದಲ್ಲಿ ಅವರ ಮಗಳು ರಿತನ್ಯಾ ನಟಿಸುವಂತಾಗಿದೆ ಎಂದು ಕೆಲವರು ಹಳೇ ವೀಡಿಯೋ ವೈರಲ್ ಮಾಡ್ತಿದ್ದಾರೆ.

'ಕಾಗೆ ಬಂಗಾರ' ಚಿತ್ರದಲ್ಲಿ ಸೂರ್ಯ ಪ್ರಖ್ಯಾತ್ ಹೀರೊ ಆಗಿ ನಟಿಸ್ತಿದ್ದಾರೆ. ಹರ್ಷಿತ್ ಆರ್ ಗೌಡ ಬಂಡವಾಳ ಹೂಡುತ್ತಿದ್ದು ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪ್ರಶಾಂತ್ ಸಿದ್ದಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಣ್ಣ ಟೀಸರ್ ಬಿಟ್ಟು ಸೂರಿ ಕುತೂಹಲ ಮೂಡಿಸಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

ಮತ್ತೊಂದು ಕಡೆ ದುನಿಯಾ ವಿಜಯ್ ಕೂಡ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟು ಗೆದ್ದಿದ್ದಾರೆ. ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಕೊಟ್ಟು ಹ್ಯಾಟ್ರಿಕ್ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. 'ಸಲಗ' ಹಾಗೂ 'ಭೀಮ' ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿದ್ದ ವಿಜಯ್, 'ಸಿಟಿಲೈಟ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಮಾತ್ರ ಹೇಳಿದ್ದರು. ವಿಜಯ್ ರಾಜ್‌ಕುಮಾರ್ ಜೊತೆಗೆ ವಿಜಯ್ ಪುತ್ರಿ ಮೋನಿಷಾ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.