ಸಿನಿಮಾ ತಾರೆಯರಿಗೆ ಸಾರ್ವಜನಿಕರ ಸ್ಥಳಗಳಲ್ಲಿ ಚಿತ್ರವಿಚಿತ್ರ ಅನುಭವವಾಗುತ್ತದೆ. ಅಭಿಮಾನಿಗಳ ಆರ್ಭಟ ಕೆಲವೊಮ್ಮೆ ಹೆಚ್ಚಾಗಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅವರ ಅತಿರೇಕದ ವರ್ತನೆಗೆ ಬೇಸತ್ತು ಹೋಗುವಂತಾಗಿದೆ. ಬಹುಭಾಷಾ ನಟಿ ಕೀರ್ತಿ ಸುರೇಶ್‌ ಅವರಿಗೂ ಇಂಥದ್ದೇ ಕಹಿ ಅನುಭವ ಎದುರಾಗಿದೆ.

ಕೀರ್ತಿ ಸುರೇಶ್ ನಟನೆಯ 'ಅಕ್ಕ' ವೆಬ್ ಸೀರಿಸ್ ಬಿಡುಗಡೆ ಆಗ್ತಿದೆ. ರಾಧಿಕಾ ಆಪ್ಟೆ ಹಾಗೂ ಕೀರ್ತಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್ ಕಥಾಹಂದರದ ವೆಬ್ ಸೀರಿಸ್ ಬಹಳ ಕುತೂಹಲ ಮೂಡಿಸಿದೆ. ಇದರ ಪ್ರಚಾರದ ಭಾಗವಾಗಿ ಮಹಾನಟಿ ಮಾಲಿವುಡ್ ಬೆಡಗಿ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಕುಡಿದು ಬಂದು ಸೆಲ್ಫಿ ಕೇಳಿದ ಅಭಿಮಾನಿಯೊಬ್ಬನ ಬಗ್ಗೆ ಕೀರ್ತಿ ಸುರೇಶ್ ಮಾತನಾಡಿದ್ದಾರೆ.

ಒಮ್ಮೆ ವಿಮಾನ ನಿಲ್ದಾಣದಲ್ಲಿ ಕುಡಿದು ತೂರಾಡುತ್ತಿದ್ದ ವ್ಯಕ್ತಿ ಸೆಲ್ಫಿ ಕೇಳಿದ. ಆತನಿಗೆ ನಿಲ್ಲಲು ಶಕ್ತಿ ಇರಲಿಲ್ಲ. ಸ್ವಲ್ಪ ಹೊತ್ತು ಇರಿ ಎಂದೆ. ಆದರೂ ಕೇಳದೇ ಕೂಡಲೇ ಫೋಟೊ ಬೇಕು ಎಂದು ಪಟ್ಟು ಹಿಡಿದ. ಕೂಡಲೇ ನನ್ನ ಪತಿ ಆಂಟೋನಿ ತಟ್ಟಿಲ್ ಕೆಂಡಾಮಂಡಲವಾಗಿದ್ದರು. ಪರಿಸ್ಥಿತಿ ಕೈಮೀರುತ್ತಿದೆ ಎನಿಸಿದಾಗ ಏರ್‌ಪೋರ್ಟ್ ಸಿಬ್ಬಂದಿ ಸಹಾಯ ಕೇಳುವಂತಾಯಿತು. ನನ್ನ ಪತಿ ಅಭಿಮಾನಿಗಳ ಜೊತೆ ಬಹಳ ಸೌಮ್ಯವಾಗಿ ನಡೆದುಕೊಳ್ಳುತ್ತಾರೆ. ಅವತ್ತೇ ಆ ರೀತಿ ಅವ್ರು ಗರಂ ಆಗಿದ್ದನ್ನು ನಾನು ನೋಡಿದ್ದು ಎಂದು ಕೀರ್ತಿ ತಿಳಿಸಿದ್ದಾರೆ.

ಎಲ್ಲಾ ಅಭಿಮಾನಿಗಳು ಇದೇ ರೀತಿ ಇರಲ್ಲ. ಬಹುತೇಕರು ಬಹಳ ಸೌಮ್ಯವಾಗಿ ವರ್ತಿಸುತ್ತಾರೆ. ಆದರೆ ಕೆಲವರು ಮಾತ್ರ ಹೀಗೆ ನಡೆದುಕೊಳ್ಳುತ್ತಾರೆ ಎಂದು ಕೀರ್ತಿ ವಿವರಿಸಿದ್ದಾರೆ. ಮದುವೆ ಬಳಿಕ ಕೂಡ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಕೇರಳಂ ಚೆಲುವೆ ಕೆಲಸ ಮಾಡುತ್ತಿದ್ದಾರೆ.