ಬಹುಭಾಷಾ ನಟ ಅರ್ಜುನ್ ಸರ್ಜಾ ತಮ್ಮ ಕಿರಿಮಗಳು ಅಂಜನಾ ಮದುವೆಯನ್ನು ನೆರವೇರಿಸಿ ಖುಷಿಪಟ್ಟಿದ್ದರು. ಇತ್ತೀಚೆಗೆ ಸದ್ದಿಲ್ಲದೇ ವಿದೇಶದಲ್ಲಿ ಪ್ರಿಯಕರ ಐಸಾಯಾ ನಟರ್ ಜೊತೆ ಅಂಜನಾ ಸರ್ಜಾ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಇಟಲಿಯ ಟಸ್ಕನಿಯಲ್ಲಿರುವ ಮದುವೆ ನೆರವೇರಿದೆ. ಅಂಜನಾ, ಅರ್ಜುನ್ ಸರ್ಜಾ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 19ರಂದು ಎರಡು ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಅಂಜನಾ ಹಾಗೂ ಐಸಾಯಾ ನಟರ್ ತಮ್ಮ 14 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಶೀಘ್ರದಲ್ಲೇ ಚೆನ್ನೈನಲ್ಲಿ ಆಕ್ಷನ್ ಕಿಂಗ್ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಆಯೋಜಿಸುವ ಸಾಧ್ಯತೆಯಿದೆ. ಎರಡು ವರ್ಷಗಳ ಹಿಂದೆ ಹಿರಿ ಮಗಳು ಐಶ್ವರ್ಯ ಹಾಗೂ ಉಮಾಪತಿ ಮದುವೆಯನ್ನು ಕೂಡ ಅರ್ಜುನ್ ಸರ್ಜಾ ಅದ್ಧೂರಿಯಾಗಿ ನೆರವೇರಿಸಿದ್ದರು. ಆದರೆ ಅಂಜನಾ ಮದುವೆ ಸಮಾರಂಭದಲ್ಲಿ ಅರ್ಜುನ್ ಸರ್ಜಾ ಹಿರಿ ಅಳಿಯ ಉಮಾಪತಿ ಕಾಣಿಸಿಕೊಳ್ಳದೇ ಇರವುದು ಅಚ್ಚರಿ ಮೂಡಿಸಿದೆ.
ಕುಟುಂಬದ ಸಮಾರಂಭ ಎಂದರೆ ಎಲ್ಲರೂ ಇರಲೇಬೇಕಲ್ಲ. ಮಗಳು ಐಶ್ವರ್ಯ ಮಾತ್ರ ಭಾಗಿ ಆಗಿದ್ದು ಅಳಿಯ ಉಮಾಪತಿ ಕಾಣಿಸಿಕೊಳ್ಳದೇ ಇರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಮದುವೆ ಫೋಟೊಗಳಲ್ಲಿ ಅರ್ಜುನ್ ಸರ್ಜಾ, ಪತ್ನಿ, ಮಗಳು ಐಶ್ವರ್ಯ ಜೊತೆ ಪೋಸ್ ಕೊಟ್ಟಿದ್ದಾರೆ. ಐಸಾಯಾ ನಟರ್ ಪತ್ನಿ ಹಾಗೂ ತಮ್ಮ ಪೋಷಕರ ಜೊತೆ ಪೋಸ್ ಕೊಟ್ಟಿರುವುದನ್ನು ನೋಡಬಹುದು. ಉಮಾಪತಿ ಇಲ್ಲದೇ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಅರ್ಜುನ್ ಸರ್ಜಾ ಮಗಳು ಐಶ್ವರ್ಯ ತಂದೆ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಕಿರಿ ಮಗಳು ಸಿನಿಮಾ ಕ್ಷೇತ್ರ ಬಿಟ್ಟು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಜನಾ ಯುನೈಟೆಡ್ ಸ್ಟೇಟ್ಸ್ನಲ್ಲಿ ವ್ಯಾಸಂಗ ಮಾಡುವಾಗ ಐಸಾಯಾ ನಟರ್ ಪರಿಚಯ, ಸ್ನೇಹ ಶುರುವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿ 14 ವರ್ಷಗಳ ಬಳಿಕ ಪೋಷಕರ ಒಪ್ಪಿಗೆ ಪಡೆದು ಜೋಡಿ ಹೊಸ ಜೀವನ ಆರಂಭಿಸಿದ್ದಾರೆ.
ಮಗಳ ಮದುವೆ ಫೋಟೊಗಳನ್ನು ಹಂಚಿಕೊಂಡಿರುವ ಅರ್ಜುನ್ ಸರ್ಜಾ "ಇಂದು ನನ್ನ ಹೃದಯ ತುಂಬಿದೆ. ನನ್ನ ಸುಂದರ ಮಗಳು, ಅಂಜನಾ, ಮತ್ತು ನನ್ನ ಪ್ರೀತಿಯ ಅಳಿಯ, ಐಶಾಯ, ನಿಮ್ಮ ಪ್ರೀತಿಯು ಪ್ರತಿ ಸೂರ್ಯೋದಯದೊಂದಿಗೆ ಬಲವಾಗಿ ಬೆಳೆಯಲಿ, ಮತ್ತು ನಿಮ್ಮ ಮನೆ ಯಾವಾಗಲೂ ನಗು ಆಶೀರ್ವಾದದಿಂದ ತುಂಬಿರಲಿ. ಕುಟುಂಬಕ್ಕೆ ಸ್ವಾಗತ, ಮಗ. ವಿಲ್ಲಾ ಸೆಟಿನಾಲೆಯಲ್ಲಿ ಟಸ್ಕನ್ ಆಕಾಶದ ಅಡಿಯಲ್ಲಿ, ಎರಡು ಆತ್ಮಗಳು ಒಂದಾದವು.. ಒಟ್ಟಿಗೆ ಸಂತೋಷದ ಜೀವಿತಾವಧಿ ಇಲ್ಲಿದೆ" ಎಂದು ಬರೆದುಕೊಂಡಿದ್ದಾರೆ.