ಬಹುಭಾಷಾ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಶುರುವಾಗಿದೆ. ಐಶ್ವರ್ಯಾ ಸರ್ಜಾ ಬಳಿಕ ಕಿರಿ ಮಗಳು ಅಂಜನಾ ಮದುವೆಗೆ ಆಕ್ಷನ್ ಕಿಂಗ್ ಸಿದ್ಧತೆ ನಡೆಸಿದ್ದಾರೆ. ವಿದೇಶಿ ಹುಡುಗನ ಜೊತೆ ಅಂಜನಾ ಲವ್‌ ಸ್ಟೋರಿ ಗೊತ್ತೇಯಿದೆ. ಇದೀಗ ಪ್ರಿಯಕರನ ಜೊತೆ ಮಗಳ ಮದುವೆ ಮಾಡಲು ಅರ್ಜುನ್ ಸರ್ಜಾ ಮುಂದಾಗಿದ್ದಾರೆ.

ಅಕ್ಟೋಬರ್ 18ರಂದು ಇಸಾಯ ಎಂಬುವವರ ಜೊತೆ ಅಂಜನಾ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಅರ್ಜುನ್ ಸರ್ಜಾ ಹಿರಿ ಮಗಳು ಐಶ್ವರ್ಯ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. ಕಳೆದ ವರ್ಷ ಇಟಲಿಯಲ್ಲಿ ಕಿರಿಮಗಳ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಮಾಹಿತಿ ಹಂಚಿಕೊಂಡಿದ್ದರು.

"ನನ್ನ ರಾಜಕುಮಾರಿ ಅಂಜನಾ ಶೀಘ್ರದಲ್ಲೇ ರಾಣಿಯಾಗಲಿದ್ದಾಳೆ. ನನ್ನ ಎರಡನೇ ಮಗ ಇಸಾಯನನ್ನೂ ನಾನು ಅತಿ ಶೀಘ್ರದಲ್ಲೇ ಮನೆಗೆ ಬರಮಾಡಿಕೊಳ್ಳಲಿದ್ದೇನೆ" ಎಂದು ಕ್ಯಾಪ್ಷನ್ ಕೊಟ್ಟು ಫೋಟೊಗಳನ್ನು ಹಾಕಿದ್ದರು. ಇದೀಗ ಅಂಜನಾ- ಇಸಾಯ ಮದುವೆಗೆ ವೇದಿಕೆ ಸಿದ್ಧವಾಗ್ತಿದೆ. ಇಬ್ಬರದ್ದು 13 ವರ್ಷಗಳ ರಿಲೇಷನ್‌ಶಿಪ್. ಪರಸ್ಪರ ಪ್ರೀತಿಸಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಅಕ್ಕ ಐಶ್ವರ್ಯ ಚಿತ್ರರಂಗಕ್ಕೆ ಬಂದರೂ ಅಂಜನಾ ಸಿನಿಮಾ ಬಿಟ್ಟು ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ.

ಕೆಲವೇ ಆಪ್ತರ ಸಮ್ಮುಖದಲ್ಲಿ ಇಸಾಯ ಹಾಗೂ ಅಂಜನಾ ಮದುವೆ ನಡೆಯುತ್ತದೆ ಎನ್ನಲಾಗ್ತಿದೆ. ಕನ್ನಡ ಚಿತ್ರರಂಗದಿಂದ ಯಾರಿಗಾದರೂ ಆಹ್ವಾನ ಸಿಗುತ್ತಾ ಕಾದು ನೋಡಬೇಕು. ಅರ್ಜುನ್ ಸರ್ಜಾ ತಮಿಳು ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದರೂ ಅವರು ಮೂಲ ಕರ್ನಾಟಕ. ಖ್ಯಾತ ಖಳನಟ ಶಕ್ತಿಪ್ರಸಾದ್ ಪುತ್ರ ಅರ್ಜುನ್ ಸರ್ಜಾ ತಂದೆ ಹಾದಿಯಲ್ಲೇ ಚಿತ್ರರಂಗ ಪ್ರವೇಶಿಸಿದ್ದರು.