ಬಹುಭಾಷಾ ನಟ ಅರ್ಜುನ್ ಸರ್ಜಾ ಕಿರಿ ಮಗಳ ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತ್ತು. ವಿದೇಶದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮಗಳು ಅಂಜನಾ ಮದುವೆ ನಡೆದಿತ್ತು. ಆದರೆ ಮದುವೆ ಸಮಾರಂಭದಲ್ಲಿ ಹಿರಿಯ ಮಗಳು ಐಶ್ವರ್ಯಾ ಪತಿ ಭಾಗಿ ಆಗಿರಲಿಲ್ಲ. ಈ ಬಗ್ಗೆ ಭಾರೀ ಚರ್ಚೆ ನಡೀತು.

ಐಶ್ವರ್ಯಾ ಸರ್ಜಾ ಹಾಗೂ ಪತಿ ಉಮಾಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಇಬ್ಬರು ದೂರಾಗುತ್ತಾರೆ ಎನ್ನುವ ವದಂತಿ ನಡುವೆ ಕೆಲವರು ಐಶ್ವರ್ಯಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಬಂದಂತೆ ಆರೋಪ ಮಾಡಿದ್ದರು. ಅದಕ್ಕೆಲ್ಲಾ ಅರ್ಜುನ್ ಸರ್ಜಾ ತಿರುಗೇಟು ನೀಡಿದ್ದಾರೆ. ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಸುದೀರ್ಘ ಪತ್ರ ಬರೆದು ಪ್ರತಿಕ್ರಿಯಿಸಿದ್ದಾರೆ.

ಅಂಜನಾಳ ಮದುವೆಯ ಸಂದರ್ಭದಲ್ಲಿ ಅವಳಿಗೆ ಮತ್ತು ನಮ್ಮ ಕುಟುಂಬಕ್ಕೆ ತಮ್ಮ ಪ್ರೀತಿ ಹಾಗೂ ಶುಭಾಶಯಗಳನ್ನು ಕಳುಹಿಸಿದ ಎಲ್ಲರಿಗೂ ನಾನು ಧನ್ಯವಾದ ಎಂದು ಅರ್ಜುನ್ ಸರ್ಜಾ ಪತ್ರ ಬರೆಯಲು ಆರಂಭಿಸಿದ್ದಾರೆ. ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಕಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನ್ನ ಕಿರಿಯ ಮಗಳ ಮದುವೆಯ ಸಮಯದಲ್ಲಿ, ನನ್ನ ಹಿರಿಯ ಮಗಳ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಅವರ ಖಾಸಗಿತನವನ್ನು ಗೌರವಿಸುವ ಉದ್ದೇಶದಿಂದ, ಅವರಿಗೆ ಮಾತ್ರ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸದಿರಲು ನಾನು ನಿರ್ಧರಿಸಿದ್ದೆ. ಪ್ರತಿಯೊಬ್ಬ ಮಹಿಳೆಗೂ ತಮ್ಮದೇ ಆದ ಆಯ್ಕೆಗಳನ್ನು ಮಾಡಿಕೊಳ್ಳುವ ಮತ್ತು ತಮ್ಮದೇ ಆದ ರೀತಿಯಲ್ಲಿ ಬದುಕುವ ಹಕ್ಕಿದೆ. ಅವರು ಬಯಸಿದರೆ, ಸೂಕ್ತ ಸಮಯದಲ್ಲಿ ತಾವೇ ಈ ಬಗ್ಗೆ ಮಾತನಾಡುತ್ತಾರೆ" ಎಂದು ಅರ್ಜುನ್ ಸರ್ಜಾ ಬೇಸರ ಹೊರ ಹಾಕಿದ್ದಾರೆ.

ದೂರು ದಾಖಲಿಸಿರುವ ಬಗ್ಗೆ ಅರ್ಜುನ್ ಸರ್ಜಾ ತಿಳಿಸಿದ್ದಾರೆ. "ಒಬ್ಬ ತಂದೆಯಾಗಿ, ನನ್ನ ಮಗಳ ಬಗ್ಗೆ, ಆಕೆಯ ವ್ಯಕ್ತಿತ್ವ ಮತ್ತು ವೈಯಕ್ತಿಕ ಜೀವನದ ಕುರಿತು ಸುಳ್ಳು ಹಾಗೂ ಅತ್ಯಂತ ಅವಹೇಳನಕಾರಿ ಆರೋಪಗಳನ್ನು ಮಾಡಲಾಗುತ್ತಿರುವುದನ್ನು ಕಂಡು ನಾನು ಸುಮ್ಮನಿರಲು ಸಾಧ್ಯವಿಲ್ಲ. ಯಾರೊಬ್ಬರಿಗೂ ಕಥೆಗಳನ್ನು ಸೃಷ್ಟಿಸಲು ಅಥವಾ ವ್ಯಕ್ತಿಯ ಚಾರಿತ್ರ್ಯವನ್ನು ಹಾನಿ ಮಾಡಲು (character assassination) ಹಕ್ಕಿರುವುದಿಲ್ಲ. ಯಾವುದೇ ಆಧಾರವಿಲ್ಲದೆ, ಒಬ್ಬ ಮಹಿಳೆಯನ್ನು 'ಮದ್ಯವ್ಯಸನಿ' ಕರೆದು ಅವಹೇಳನಕಾರಿ ಟೀಕೆಗಳನ್ನು ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಔಪಚಾರಿಕ ದೂರು ನೀಡುವ ಮೂಲಕ ಸೂಕ್ತ ಕ್ರಮ ಕೈಗೊಂಡಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.