ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ನಡೆಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ (FIR) ಅನ್ನು ರದ್ದುಗೊಳಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಪ್ರತಾಪ್ ಮಾತನಾಡಿದ್ದಾರೆ.
ಎರಡು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಪ್ರತಾಪ್ ಪ್ರಯೋಗ ಮಾಡಿದ್ದರು. ಆ ವೀಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದರು. ಅದು ವೈರಲ್ ಆಗಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಹಿನ್ನೆಲೆಯಲ್ಲಿ ಮಿಡಿಗೇಶಿ ಠಾಣೆಯ ಪೊಲೀಸರು ಸ್ವಯಂಪ್ರೇರಿತರಾಗಿ (Suo Moto) ಕೇಸ್ ದಾಖಲಿಸಿದ್ದರು. ಪ್ರಕರಣ ಸಂಬಂಧ ಪ್ರತಾಪ್ ಬಂಧನವಾಗಿತ್ತು. ಬಳಿಕ ಜಾಮೀನು ಪಡೆದು ಪ್ರತಾಪ್ ಬಿಡುಗಡೆ ಆಗಿದ್ದರು.
ಇದೇ ಪ್ರಕರಣದಲ್ಲಿ ನಾನು ಇನೋಸೆಂಟ್ ಎಂದು ಹೈಕೋರ್ಟ್ ಹೇಳಿದೆ ಎಂದು ಪ್ರತಾಪ್ ಭಾವುಕರಾಗಿ ಮಾತನಾಡಿದ್ದಾರೆ. "ಇದು ಖುಷಿಯಿಂದ ಹಾಕ್ತಿರೋ ಕಣ್ಣೀರು. ಇವತ್ತು ನ್ಯಾಯಾಲಯದಲ್ಲಿ ಎಲ್ಲಾ ಪ್ರಕರಣ ರದ್ದು ಮಾಡಿ ನಿರಪರಾಧಿಯಾಗಿ ನಾನು ನಿಂತಿದ್ದೀನಿ. ವಕೀಲರಾದ ಸಾಗರ್ ಸಾಲಿಮಠ್ ಹಾಗೂ ಅವರ ತಂಡಕ್ಕೆ ನನ್ನ ಕೃತಜ್ಞತೆಗಳು. ಸಾಕಷ್ಟು ಕೇಸ್ ನನ್ನ ಮೇಲೆ ದಾಖಲಿಸಿದ್ದರು. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ಆದ್ರೆ ಕೆಲ ಕಂಟೆಂಟ್ ಕ್ರಿಯೇಟರ್ಸ್ ಬಾಯಿಗೆ ಬಂದಂತೆ ನನ್ನ ಬಗ್ಗೆ ಮಾತನಾಡಿದ್ರು. ನೀವು ಇಷ್ಟೆಲ್ಲಾ ಮಾತನಾಡಿದ್ರಿ, ಕೊನೆಗೆ ಎಲ್ಲಾ ಪ್ರಕರಣಗಳನ್ನು ಹೈಕೋರ್ಟ್ ರದ್ದು ಮಾಡಿದೆ" ಎಂದಿದ್ದಾರೆ.
ನಾನು ಯಾರಿಗೆ ಏನು ತೊಂದರೆ ಕೊಟ್ಟೆ. ನನ್ನ ಜೀವನದ ಕೊಂಚ ಒಳ್ಳೆ ಸಮಯವನ್ನು ಹಾಳುಮಾಡಿಬಿಟ್ರಿ. ನಾನು ಏನು ತಪ್ಪು ಮಾಡದೇ ಇದ್ರೂ ಇಷ್ಟೆಲ್ಲಾ ಮಾಡಿದ್ರಿ. ಹೈಕೋರ್ಟ್‌ಗೆ ಧನ್ಯವಾದ. ನಾನು ನಿರಪರಾಧಿ ಎಂದು ಸಾಬೀತಾಗಿದೆ, ಇದು ಸತ್ಯಕ್ಕೆ ಸಿಕ್ಕ ಜಯ.. ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿದ್ದ ಪ್ರತಾಪ್ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದರು.