ಚಿತ್ರ: 'ದೃಶ್ಯಂ'- ದಿ ಕನ್ಲೂಷನ್
ನಿರ್ದೇಶನ: ಅಭಿಷೇಕ್ ಪಾಠಕ್
ಕಲಾವಿದರು: ಅಜಯ್ ದೇವಗನ್, ಟಬು, ಜೈದೀಪ್ ಅಹ್ಲಾವತ್, ಪ್ರಕಾಶ್ ರಾಜ್ ಮಂತಾದವರು.
ಸಂಗೀತ: ರವಿ ಬಸ್ರೂರು
ನಿರ್ಮಾಣ: ಪನೋರಮಾ ಸ್ಟುಡಿಯೋಸ್ ಹಾಗೂ
ಸ್ಟಾರ್ ಸ್ಟುಡಿಯೋ18
ಸೂಪರ್ ಹಿಟ್ 'ದೃಶ್ಯಂ' ಸರಣಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮಲಯಾಳಂನಲ್ಲಿ ಆರಂಭವಾಗಿದ್ದ ಸಿನಿಮಾ ಬಳಿಕ ಬೇರೆ ಬೇರೆ ಭಾಷೆಗಳಿಗೆ ರೀಮೆಕ್ ಆಗಿತ್ತು. ಆದರೆ ಮೂರನೇ ಭಾಗವನ್ನು ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದ್ದರು. ಇದೀಗ 'ದೃಶ್ಯಂ' -3 ಹಿಂದಿ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತದೆ.
ಮಲಯಾಳಂನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಜಯ್ ದೇವಗನ್ ನಿಭಾಯಿಸಿದ್ದಾರೆ. ಮೊದಲ ಎರಡು ಭಾಗ ಮಾಲಿವುಡ್ ರೀಮೆಕ್ ಆಗಿದ್ದರೂ ಮೂರನೇ ಭಾಗದ ಕಥೆ ಸಂಪೂರ್ಣವಾಗಿ ಬದಲಾಗಿದೆ. ಆದರೆ ಮೂಲಕ ಕಥೆಯ ಆಶಯ ಅದೇ ಇದೆ. ಅಚಾನಕ್ ಆಗಿ ತನ್ನ ಮಡದಿ, ಮಗಳು ಮಾಡಿದ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ವಿಜಯ್ ಸಾಳ್ಗಾಂವ್ಕರ್ ಹೋರಾಟ ಮುಂದುವರೆದಿದೆ. ಕಥೆಗೆ ಅಂತಿಮ ವಿದಾಯ ಕೂಡ ಹಾಡಿದ್ದಾರೆ.
'ದೃಶ್ಯಂ'- 3 ಕಥೆ
4 ವರ್ಷಗಳ ಹಿಂದೆ 'ದೃಶ್ಯಂ'- 2 ಎಲ್ಲಿಗೆ ಮುಕ್ತಾಯವಾಗಿತ್ತೋ ಅಲ್ಲಿಂದಲೇ 'ದೃಶ್ಯಂ'- ದಿ ಕನ್ಲೂಷನ್ ಕಥೆ ಶುರುವಾಗುತ್ತದೆ. ಸಮೀರ್ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿಗೆ ವಿಜಯ್ ಸಾಲ್ಗಾಂಕರ್ (ಅಜಯ್ ದೇವಗನ್) ಫ್ಯಾಮಿಲಿ ಎದುರು ನೋಡುತ್ತಿರುತ್ತದೆ. ವಿಜಯ್ ತನ್ನ ಮಗಳು ಅಂಜು ಮದುವೆ ಮಾಡಲು ತಯಾರಿ ನಡೆಸುತ್ತಾನೆ. ಮತ್ತೊಂದು ಕಡೆ ಮಗನನ್ನು ಕಳೆದುಕೊಂಡು ಅದಕ್ಕೆ ಕಾರಣ ವಿಜಯ್ ಫ್ಯಾಮಿಲಿ ಎಂದು ಗೊತ್ತಿದ್ದು ಏನು ಮಾಡೋಕೆ ಸಾಧ್ಯವಾಗದೇ ಮೀರಾ ದೇಶ್‌ಮುಖ್ (ಟಬು) ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾಳೆ.
ಮೀರಾ ಆತ್ಮಹತ್ಯೆಗೆ ಯತ್ನಿಸಿದಾಗ ಪತಿ ಮಹೇಶ್ (ರಜತ್ ಕಪೂರ್) ತಡೆದು ಕೇಸ್ ಮತ್ತೆ ರೀ-ಓಪನ್ ಮಾಡಿಸುವುದಾಗಿ ಭರವಸೆ ನೀಡುತ್ತಾನೆ. ಅದಕ್ಕಾಗಿ ಕ್ರೈಮ್ ಬ್ರಾಂಚ್ ಎಸ್ಪಿ. ರಾಜ್‌ವೀರ್ ಸಿಂಗ್ ತೋಮರ್ (ಜೈದೀಪ್ ಅಹ್ಲಾವತ್) ಜೊತೆ ಕೈಜೋಡಿಸುತ್ತಾನೆ. ಮುಂದೆ ಪ್ರಕರಣದಲ್ಲಿ ವಿಜಯ್ ವಿರುದ್ಧ ಎಸ್ಪಿ ಏನೆಲ್ಲಾ ಸಾಕ್ಷ್ಯಾಧಾರ ಸಂಗ್ರಹಿಸುತ್ತಾನೆ ? ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಇಂದ್ರಸೇನ್ ಶೆಟ್ಟಿ (ಪ್ರಕಾಶ್ ರಾಜ್) ಆ ಸಾಕ್ಷ್ಯಗಳನ್ನು ಹೇಗೆ ನಿರೂಪಿಸುತ್ತಾನೆ ? ಅದನ್ನೆಲ್ಲಾ ಮೀರಿ ವಿಜಯ್ ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ? ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ ?
ಕಥೆ ಗೊತ್ತಿರುವುದರಿಂದ 'ದೃಶ್ಯಂ'- ದಿ ಕನ್ಲೂಷನ್ ಸಿನಿಮಾ ಆರಂಭವಾಗುತ್ತಿದ್ದಂತೆ ಮುಂದೆ ಏನೆಲ್ಲಾ ಆಗಬಹುದು ಎಂದು ಊಹಿಸಿಬಿಡಬಹುದು. ಆದರೆ ಅದನ್ನು ಯಾವ ರೀತಿ ಎಂಗೇಜಿಂಗ್ ಆಗಿ ಕಟ್ಟಿಕೊಟ್ಟಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. 'ದೃಶ್ಯಂ'- 3 ಮಲಯಾಳಂ ಚಿತ್ರಕ್ಕೆ ಯಾವುದೇ ಹೋಲಿಕೆ ಇಲ್ಲದಂತೆ ಇಲ್ಲಿ ಕಥೆ ಸಾಗುತ್ತದೆ. ಬೇರೆಯದೇ ರೀತಿಯಲ್ಲಿ ಅಭಿಷೇಕ್ ಪಾಠಕ್ ಮತ್ತು ತಂಡ ಚಿತ್ರಕಥೆಯನ್ನು ಹೆಣೆದಿದೆ. ಅಲ್ಲೇ ಅರ್ಧ ಚಿತ್ರ ಗೆದ್ದು ಬಿಟ್ಟಿದೆ.
ನಾಲ್ಕನೇ ಕ್ಲಾಸ್ ಓದಿರುವ ವಿಜಯ್ ಸಾಲ್ಗಾಂಕರ್ ಇಡೀ ಪೊಲೀಸ್ ಇಲಾಖೆಗೆ ಹೇಗೆ ಚಳ್ಳೆಹಣ್ಣು ತಿನ್ನಿಸುತ್ತಾನೆ. ಕುಟುಂಬಕ್ಕೆ ಸಂಕಷ್ಟ ಎದುರಾದರೆ ಒಬ್ಬ ಸಾಮಾನ್ಯ ವ್ಯಕ್ತಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ಮತ್ತೊಮ್ಮೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ವಿಜಯ್ ಹಾಗೂ ಎಸ್.ಪಿ. ರಾಜ್‌ವೀರ್ ಸಿಂಗ್ ನಡುವಿನ ಸನ್ನಿವೇಶಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ. ಫಸ್ಟ್ ಹಾಫ್ ಕೊಂಚ ಸ್ಲೋ ಅನಿಸುತ್ತದೆ. ಆದರೆ ಸೆಕೆಂಡ್ ಹಾಫ್ ಪ್ರೇಕ್ಷಕರು ಒಂದು ಕ್ಷಣ ಕೂಡ ಅತ್ತಿತ್ತ ಗಮನ ಹರಿಸದಂತೆ ಸಿನಿಮಾ ಕಟ್ಟಿ ಹಾಕಿಬಿಡುತ್ತದೆ.
ಫಸ್ಟ್ ಹಾಫ್ ಕೊಂಚ ಸ್ಲೋ ಅನ್ನಿಸಿದರೂ ಬಳಿಕ ಕೋರ್ಟ್ ರೂಮ್ ಡ್ರಾಮಾ ಶುರುವಾದ ಮೇಲೆ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ಕೊನೆ ಕೊನೆಗೆ ಬರುವ ಟ್ವಿಸ್ಟ್‌ಗಳು ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡುತ್ತದೆ. ಅದರಲ್ಲೂ ನಂದಿನಿ(ಶ್ರಿಯಾ ಶರಣ್) ಕೊಡುವ ಟ್ವಿಸ್ಟ್ ಮಜವಾಗಿರುತ್ತದೆ. ಅಜಯ್ ದೇವಗನ್ ಹಾಗೂ ಜೈದೀಪ್ ಅಹ್ಲಾವತ್ ಮುಖಾಮುಖಿ ದೃಶ್ಯಗಳು ಮತ್ತಷ್ಟು ಅದ್ಭುತವಾಗಿದೆ.
ಕಲಾವಿದರ ನಟನೆ
ವಿಜಯ್ ಪಾತ್ರದಲ್ಲಿ ಮತ್ತೊಮ್ಮೆ ಅಜಯ್ ದೇವಗನ್ ಕಮಾಲ್ ಮಾಡಿದ್ದಾರೆ. ಪಾತ್ರಕ್ಕೆ ಬೇಕಾದ ಭಾವಾಭಿನಯವನ್ನು ಸೊಗಸಾಗಿ ತೆರೆಮೇಲೆ ತಂದಿದ್ದಾರೆ. ಹಿಂದಿನ ಎರಡೂ ಸಿನಿಮಾಗಳಲ್ಲಿ ಇದ್ದ ಓಘವನ್ನು ಇಲ್ಲಿ ಕಾಯ್ದುಕೊಂಡಿದ್ದಾರೆ. ಇನ್ನುಳಿದಂತೆ ಶ್ರಿಯಾ ಶರಣ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಅಚ್ಚರಿ ಅಂದ್ರೆ ಜೈದೀಪ್ ಅಹ್ಲಾವತ್.. ಕೆಲ ಸನ್ನಿವೇಶಗಳಲ್ಲಿ ಎಲ್ಲರನ್ನು ಮೀರಿಸಿ ಜೈದೀಪ್ ಅಹ್ಲಾವತ್ ಹೆಚ್ಚು ಅಂಕ ಗಿಟ್ಟಿಸಿಬಿಟ್ಟಿದ್ದಾರೆ. ನಿಜಕ್ಕೂ ಇದು ದೊಡ್ಡ ಸರ್‌ಪ್ರೈಸ್ ಅಂದ್ರೆ ತಪ್ಪಾಗಲ್ಲ. ಇನ್ನು ಅಜಯ್, ಜೈದೀಪ್ ಹಾಗೂ ಪ್ರಕಾಶ್ ರಾಜ್ ಆರ್ಭಟದ ನಡುವೆ ಟಬು ಕೊಂಚ ಡಲ್ ಎನಿಸಿಬಿಟ್ಟಿದ್ದಾರೆ. ಅವರ ಪಾತ್ರಕ್ಕೂ ಇಲ್ಲಿ ಕೊಂಚ ಮಹತ್ವ ಕಮ್ಮಿ ಆಗಿರುವುದು ಅದಕ್ಕೆ ಕಾರಣ ಎನ್ನಬಹುದು.
ತಾಂತ್ರಿಕ ವರ್ಗ
'ದೃಶ್ಯಂ- 3' ಚಿತ್ರವನ್ನು ರೀಮೆಕ್ ಮಾಡದೇ ಸ್ವಂತ ಕಥೆ ಮಾಡಬೇಕು ಎಂದು ನಿರ್ಧರಿಸಿದ ಅಭಿಷೇಕ್ ಪಾಠಕ್ ಹಾಗೂ ತಂಡದ ಧೈರ್ಯವನ್ನು ಮೆಚ್ಚಲೇಬೇಕು. ಆ ಪ್ರಯತ್ನದಲ್ಲಿ ತಂಡ ಯಶಸ್ವಿಯಾಗಿದೆ. ಅಲ್ಲದೆ ಸುಖಾಸುಮ್ಮನೆ ಕಥೆ ಎಳೆಯುವುದು ಬಿಟ್ಟು ಹಿಂದಿಯಲ್ಲಿ 'ದೃಶ್ಯಂ' ಸರಣಿಯನ್ನು ಒಂದೊಳ್ಳೆ ಕ್ಲೈಮ್ಯಾಕ್ಸ್ ಜೊತೆ ಮುಗಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ಆದರೆ ಫಸ್ಟ್ ಹಾಫ್ ಬಿಜಿಎಂ ಕೊಂಚ ಡಲ್ ಎನಿಸದೇ ಇರದು. ಇನ್ನುಳಿದಂತೆ ಸುಧೀರ್ ಕೆ. ಚೌಧರಿ ಛಾಯಾಗ್ರಹಣ, ಸಂದೀಪ್ ಫ್ರಾನ್ಸಿಸ್ ಸಂಕಲನ ಎಲ್ಲವೂ ಸೊಗಸಾಗಿದೆ.
ಅಂತಿಮವಾಗಿ
ಒಂದಷ್ಟು ತಪ್ಪುಗಳನ್ನು ಹೊರತಾಗಿಯೂ 'ದೃಶ್ಯಂ'- ದಿ ಕನ್ಲೂಷನ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತದೆ. 'ದೃಶ್ಯಂ' ಸರಣಿ ಅಭಿಮಾನಿಗಳಿಗಂತೂ ಒಳ್ಳೆ ಅನುಭವ ನೀಡುತ್ತದೆ. ಮಿಸ್ ಮಾಡದೇ ಫ್ಯಾಮಿಲಿ ಜೊತೆ ಸಿನಿಮಾ ನೋಡಿ ಎಂಜಾಯ್ ಮಾಡಿ.
ರೇಟಿಂಗ್: 3/5