ಮಲಯಾಳಂನಲ್ಲಿ ಬಂದ 'ದೃಶ್ಯಂ' ಸಿನಿಮಾ ಬಳಿಕ ಕನ್ನಡ ಸೇರಿ ನಾನಾ ಭಾಷೆಗಳಿಗೆ ರೀಮೆಕ್ ಆಗಿತ್ತು. ಸೀಕ್ವೆಲ್ ಕೂಡ ಅದೇ ಹಾದಿ ಹಿಡಿಯಿತು. ಮಲಯಾಳಂ ಹಾಗೂ ಹಿಂದಿಯಲ್ಲಿ ಸರಣಿಯ ಮೂರನೇ ಸಿನಿಮಾ ಕೂಡ ತೆರೆಗಪ್ಪಳಿಸಿದ್ದು ಗೊತ್ತೇಯಿದೆ. ಬಾಲಿವುಡ್‌ನಲ್ಲಿ ಬಂದಿದ್ದ 'ದೃಶ್ಯಂ: ದಿ ಕನ್‌ಕ್ಲೂಷನ್' ಸಿನಿಮಾ ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ಅಣಿಯಾಗಿದೆ.

ಅಭಿಷೇಕ್ ಪಾಠಕ್ ನಿರ್ದೇಶನದ 'ದೃಶ್ಯಂ'-3 ಚಿತ್ರದಲ್ಲಿ ಮತ್ತೊಮ್ಮೆ ವಿಜಯ್ ಸಾಳ್ಗಾಂವ್ಕರ್ ಆಗಿ ಅಜಯ್ ದೇವಗನ್ ನಟಿಸಿ ಗಮನ ಸೆಳೆದಿದ್ದರು. ಮಲಯಾಳಂನಲ್ಲಿ ಬಂದ ಕಥೆಗೂ ಈ ಕಥೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಸಂಪೂರ್ಣ ಹೊಸ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ತೆರೆಗೆ ಬಂದಿದ್ದ ಸಿನಿಮಾ ನವೆಂಬರ್ 27ರಂದು ಓಟಿಟಿಗೆ ಬರ್ತಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'ದೃಶ್ಯಂ: ದಿ ಕನ್‌ಕ್ಲೂಷನ್' ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ತನ್ನ ಕುಟುಂಬದ ರಕ್ಷಣೆಗೆ ನಿಂತ ವಿಜಯ್ ಸಾಳ್ಗಾಂವ್ಕರ್ ಈ ಬಾರಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿದ. ಎಸ್ಪಿ ರಾಜವೀರ್ ಸಿಂಗ್ ತೋಮರ್ IPS, ಕ್ರೈಂ ಬ್ರಾಂಚ್ (ಜೈದೀಪ್ ಅಹ್ಲಾವತ್) ಹೆಣೆದ ಬಲೆಯಲ್ಲಿ ಸಿಲುಕಿಕೊಳ್ಳದೇ ಹೇಗೆ ಬಚಾವಾದ, ಮಗನ ಸಾವಿಗೆ ಮೀರಾ ದೇಶ್‌ಮುಖ್(ಟಬು) ಪ್ರತಿಕಾರ ತೀರಿಸಿಕೊಂಡ್ಲಾ? ಎನ್ನುವ ಕಥೆ ಚಿತ್ರದಲ್ಲಿದೆ.

ಸಿನಿಮಾ ತೆರೆಕಂಡ ಎರಡು ತಿಂಗಳ ಬಳಿಕ ಓಟಿಟಿಗೆ ಬರಬೇಕು ಎನ್ನುವ ನಿಯಮ ಬಾಲಿವುಡ್‌ನಲ್ಲಿದೆ. ಹಾಗಾಗಿ ಕೊಂಚ ತಡವಾಗಿ 'ದೃಶ್ಯಂ-3' ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಇಂದ್ರಜಿತ್ ಶೆಟ್ಟಿ ಪಾತ್ರದಲ್ಲಿ ಪ್ರಕಾಶ್ ರಾಜ್ ಕೂಡ ಚಿತ್ರದಲ್ಲಿದ್ದಾರೆ. ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮಲಯಾಳಂಗಿಂತ ಹಿಂದಿಯಲ್ಲಿ ಸಿನಿಮಾ ಸೂಪರ್ ಎಂದು ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.

ಅಂದಾಜು 100 ಕೋಟಿ ರೂ. ಬಜೆಟ್ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಮಲಯಾಳಂನಲ್ಲಿ ಸರಣಿಯ 4ನೇ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಹಿಂದಿಯಲ್ಲಿ 'ದೃಶ್ಯಂ' ಸರಣಿಗೆ ಬ್ರೇಕ್ ಹಾಕಲಾಗಿದೆ. ಹಾಗಾಗಿ ತೆರೆಮೇಲೆ ಸಿನಿಮಾ ನೋಡದವರು ಓಟಿಟಿಯಲ್ಲಿ ವೀಕ್ಷಿಸಿ ಸೂಪರ್ ಹಿಟ್ ಸರಣಿ ಸಿನಿಮಾ ಕಥೆಯ ಅಂತ್ಯ ಏನಾಯ್ತು ಎಂದು ನೋಡಬಹುದು.