ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಉಪೇಂದ್ರ ನಟನೆಯ 'ಸೂಪರ್ ಸ್ಟಾರ್' ಸಿನಿಮಾ ಆ ಕಾಲಕ್ಕೆ ಸದ್ದು ಗದ್ದಲ ಮಾಡಿತ್ತು. ಆದರೆ ಸಿನಿಮಾ ಗೆಲ್ಲಲಿಲ್ಲ. ಅಂದಹಾಗೆ ಉಪೇಂದ್ರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಮೇಷ್ಟ್ರ ಅರ್ಧಕ್ಕೆ ಸಿನಿಮಾ ಬಿಟ್ಟು ಹೊರ ಬಂದಿದ್ದರು. ಆದರೂ ಕ್ರೆಡಿಟ್ ಕಾರ್ಡ್‌ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಎಂದೇ ಹಾಕಲಾಗಿತ್ತು. ಈ ಬಗ್ಗೆ ಸ್ವತಃ ಮೇಷ್ಟ್ರು ಮಾತನಾಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ'-2 ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಇದೇ ವೇಳೆ ಟಿವಿ9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಿನಿಜರ್ನಿಯನ್ನು ಮೆಲುಕು ಹಾಕಿದ್ದಾರೆ. 'ಸೂಪರ್ ಸ್ಟಾರ್' ಸಿನಿಮಾ ಮೇಕಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಉಪೇಂದ್ರ ಹಾಗೂ ಮೇಷ್ಟ್ರ ಕಾಂಬಿನೇಷನ್ ಬಹಳ ವಿಶೇಷ ಅನ್ನಿಸಿತ್ತು. ಇಬ್ಬರೂ ಬಹಳ ಇಷ್ಟಪಟ್ಟು ಒಟ್ಟಾಗಿ ಸಿನಿಮಾ ಮಾಡಲು ಮುಂದಾಗಿದ್ದರು. ಅದು ನಿಜಕ್ಕೂ ಒಳ್ಳೆ ಸಬ್ಜೆಕ್ಟ್ ಎಂದು ಇವತ್ತಿಗೂ ಮೇಷ್ಟ್ರು ಹೇಳ್ತಾರೆ.

ದಿಪೇಂದ್ರನ ಕಥೆ ನನಗೆ ಬಹಳ ಕಾಡಿತ್ತು. ತನ್ನ ಪ್ರೀತಿಗಾಗಿ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದ ಕಥೆ ಅದು. ನಾನು ನೇಪಾಳಕ್ಕೆ ಹೋದಾಗ ಸಾಕಷ್ಟು ಜನರನ್ನು ಮಾತನಾಡಿಸಿದ್ದೇನೆ. ಅವನು ಸತ್ತಿಲ್ಲ. ಆತ ದೇವರು, ನಮ್ಮ ರಾಜಕುಮಾರ ಅಂಥವನಲ್ಲ ಅಂತಾರೆ.. ಒಳ್ಳೆ ಸ್ಕ್ರಿಪ್ಟ್ ಮಾಡಿದ್ದೆ. ಉಪೇಂದ್ರ ಜೊತೆ ಸಿನಿಮಾ ಆರಂಭಿಸಿದಾಗಲೇ ನಮ್ಮಿಬ್ಬರ ಆಲೋಚನೆ ಬೇರೆ ಎನ್ನುವುದು ಗೊತ್ತಿತ್ತು. ಮೇಷ್ಟ್ರು ಬಹಳ ಸಾಫ್ಟ್ ಆಗಿ ಮಾಡ್ತಿದ್ದಾರೆ ಅಂತ ಆತನಿಗೆ ಅನ್ನಿಸ್ತು.. ಉಪ್ಪಿ ಬಹಳ ವೈಲ್ಡ್ ಆಗಿ ಆಕ್ಟ್ ಮಾಡ್ತಿದ್ದಾನೆ ಅಂತ ನನಗೆ ಅನ್ನಿಸಿತ್ತು.. ಕೊನೆ ಒಂದು ತೀರ್ಮಾನಕ್ಕೆ ಬಂದೆವು. ಯಾವುದೇ ಜಗಳ, ಕೆಸರೆರಚಾಟ ಬೇಡ, ನಿಮಗೆ ಬೇಕಾದಂತೆ ನಿರ್ದೇಶನ ಮಾಡ್ಕೊಳ್ಳಿ ಎಂದು ಹೇಳಿ ನಾನು ಸಿನಿಮಾ ಬಿಟ್ಟು ಹೊರಬಂದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ಇಬ್ಬರೂ ಕೊಂಚ ತಗ್ಗಿಬಗ್ಗಿ ಒಂದಾಗಿ ಕೆಲಸ ಮಾಡಿದ್ರೆ ಅದು ಬೇರೆ ತರಹದ ಸಿನ್ಮಾ ಆಗ್ತಿತ್ತು ಎಂದಿದ್ದಾರೆ. "ದು ಸಾಧ್ಯವಾಗಲೇ ಇಲ್ಲ. ಹಿಂದಿನ ದಿನ ಮಾತನಾಡಿದ್ದು ಒಂದು, ಸ್ಪಾಟ್‌ಗೆ ಹೋಗ್ತಿದ್ದಂತೆ ಬದಲಿಸಿಬಿಡುತ್ತಿದ್ರು. ಹಾಗಾಗಿ ಇಬ್ಬರೂ ಒಟ್ಟಾಗಿ ಕೆಲಸ ಮಾಡೋದು ಬೇಡ ಎಂದು ನಿರ್ಧರಿಸಿದೆವು. ಕೊನೆಗೆ ಅವ್ರೇ ಸಿನಿಮಾ ಮಾಡಿ ಮುಗಿಸಿದ್ರು.. ಆದ್ರೆ ಸಿನಿಮಾದಲ್ಲಿ ನಿರ್ದೇಶನಕ್ಕೆ ನನ್ನ ಹೆಸ್ರು ಹಾಕಿದ್ರು.. ಯಾಕೆ ಎಂದಿದ್ದಕ್ಕೆ ನಿಮ್ಮದೇ ಒರಿಜಿನಲ್ ಥಾಟ್, ನೀವೇ ಆರಂಭಿಸಿದ್ದು ಅಂದ್ರು" ಎಂದು ನಾಗತಿಹಳ್ಳಿ ಚಂದ್ರಶೇಖರ್ ವಿವರಿಸಿದ್ದಾರೆ.