ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಮದುವೆಯಾಗಿ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ದಂಪತಿ ನಟಿಸಿದ್ದ 'ರಣಬಾಲಿ' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೆಲ್ಲದರ ನಡುವೆ ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್-ರಶ್ಮಿಕಾ ಭಾಗವಹಿಸಿದ್ದರು. ವೈಯಕ್ತಿಕ ಜೀವನದ ಬಗ್ಗೆ ಇಬ್ಬರ ಮಾತುಗಳು ವೈರಲ್ ಆಗಿ ಭಾರೀ ಟ್ರೋಲ್ ಆಗಿತ್ತು.

ಟ್ರೋಲ್ಸ್ ಬಗ್ಗೆ ದಂಪತಿ ಮೌನ ಮುರಿದಿದ್ದಾರೆ. ರಶ್ಮಿಕಾ ಏಳೆಂಟು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ವಿಜಯ್ ಕೂಡ ಪೋಸ್ಟ್ ಮಾಡಿ ನಮ್ಮಿಬ್ಬರದ್ದು ಬಿಡಿಸಲಾಗದ ನಂಟು ಎಂದಿದ್ದಾರೆ. ಇನ್ನು ಟ್ರೋಲಿಗರ ವಿರುದ್ದ ದಂಪತಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೆಲ್ಲದ ನಡುವೆ ರಶ್ಮಿಕಾ ಕನ್ನಡಿಗರನ್ನು ಕೆಣಕಿದ್ದಾರೆ ಎಂದು ಚರ್ಚೆ ಆಗ್ತಿದೆ. ಕೆಲವರು ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಳೆಂಟು ಪುಟಗಳ ಪತ್ರದಲ್ಲಿ ರಶ್ಮಿಕಾ ಕನ್ನಡಿಗರ ಬಗ್ಗೆಯೇ ಒಂದು ಪುಟದಲ್ಲಿ ಬರೆದಿದ್ದಾರೆ. ಅದೇ ಈಗ ಚರ್ಚೆಗೆ ಕಾರಣವಾಗಿದೆ.

ನನ್ನ ಕೆಲವು ಕನ್ನಡಿಗ ಸ್ನೇಹಿತರಿಗೆ... 10 ವರ್ಷಗಳ ನಂತರವೂ ನಿಮ್ಮ ಹೃದಯಗಳಲ್ಲಿ ನಾನು ಇಷ್ಟೊಂದು ಆಳವಾಗಿ ಉಳಿದುಕೊಂಡಿದ್ದೀನಿ ಎಂದು ಗೊತ್ತಾಗಿ ಸಂತೋಷವಾಯ್ತು. ಇಷ್ಟು ದೀರ್ಘಕಾಲದ ನಂತರವೂ ನೀವು ನನ್ನನ್ನು ಹೀಗೆ ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದೀರಿ ಅಂದ್ರೆ... ನಿಜಕ್ಕೂ, ನಾನು ಧನ್ಯ.. ಪ್ರೀತಿ ಮತ್ತು ಸಂತೋಷವನ್ನು ಸಂಭ್ರಮಿಸುವ ಎಲ್ಲರಿಗೂ ನನ್ನ ಪ್ರೀತಿ ಕಂಡಿತ ಇರುತ್ತೆ. ಉಳಿದವರು ದಯವಿಟ್ಟು ನಿಮಗೆ ಸಂತೋಷ ಕೊಡುವುದನ್ನು ಹುಡುಕಿಕೊಳ್ಳಿ" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಇದೇ ಈಗ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ರಶ್ಮಿಕಾ ಸಹಜವಾಗಿಯೇ ಹೀಗೆ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಆದ್ರೆ ಆಕೆ ಬೇಕೆಂದೇ ವ್ಯಂಗ್ಯವಾಗಿ ಹೀಗೆ ಬರೆದುಕೊಂಡಿದ್ದಾರೆ ಎಂದು ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಕಾಫಿ ವಿತ್ ಕರಣ್' ಶೋನಲ್ಲಿ ನಿಮ್ಮ ಮಾತನ್ನು ದೇಶಾದ್ಯಂತ ಎಲ್ಲರೂ ಟ್ರೋಲ್ ಮಾಡಿದ್ದಾರೆ. ಬೇಕೆಂದೇ ಹೀಗೆ ಕನ್ನಡಿಗರನ್ನು ಪ್ರಸ್ತಾಪಿಸಿ ಪೋಸ್ಟ್ ಮಾಡುವುದು ಸರಿಯಲ್ಲ. ನಾವು ನಿನ್ನನ್ನು ಮರೆತು ಬಹಳ ದಿನಗಳಾಯ್ತು. ನಿನ್ನ ಕೆಲಸ ನೀನು ನೋಡ್ಕೊ.. ಸುಖಾಸುಮ್ಮನೆ ಮತ್ತೆ ನಿನ್ನನ್ನು ಟ್ರೋಲ್ ಮಾಡುವಂತೆ ಮಾಡಿಕೊಳ್ಳಬೇಡ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ನಿಮಗೆ ಮೊದಲು ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ. 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿದ ಮೇಲೆ ನಿಮಗೆ ಅವಕಾಶಗಳು ಸಿಕ್ಕಿದ್ದು ಎನ್ನುವುದನ್ನು ಮರೆಯಬೇಡಿ. ನೀವು ಯಾವುದೇ ಭಾಷೆಯಲ್ಲಿ ನಟಿಸಿ, ಯಾರನ್ನು ಬೇಕಾದರೂ ಮದುವೆ ಆಗಿ ಎಲ್ಲಿ ಬೇಕಾದ್ರು ಇರಿ. ಆದರೆ ನಿಮ್ಮ ಹಿನ್ನೆಲೆಯನ್ನು ಮರೆಯಬೇಡಿ. ಕರ್ನಾಟಕದ ಬಗ್ಗೆ ಗೌರವ ಕೊಂಚ ಆದ್ರು ಇರಲಿ ಎಂದು ತಿಳಿ ಹೇಳುತ್ತಿದ್ದಾರೆ.

ಅಂದಹಾಗೆ 'ಕಾಫಿ ವಿತ್ ಕರಣ್' ಶೋನಲ್ಲಿ ರಶ್ಮಿಕಾ ನಾನು ವಿಜಯ್‌ಗೆ 100 ಬಾರಿ ಪ್ರಪೋಸ್ ಮಾಡಿದ್ದೆ ಎಂದಿದ್ದರು. ಇದನ್ನು ಕೆಲವರು ರೆಡ್ ಫ್ಲ್ಯಾಗ್, ಗ್ರೀನ್ ಫ್ಲ್ಯಾಗ್, ಬಹಳ ದಿನ ಇದು ಮುಂದುವರೆಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದರು. ತಮ್ಮ ಸುದೀರ್ಘ ಪತ್ರದಲ್ಲಿ ಇದಕ್ಕೆ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. ನಮ್ಮಿಬ್ಬರದ್ದು ಬಿಡಿಸಲಾಗದ ಬಂಧ. 100 ಬಾರಿ ಅಲ್ಲ 1000 ಬೇಕಾದ್ರು ನಾನು ಪ್ರಪೋಸ್ ಮಾಡ್ತೀನಿ ನಿಮಗೇನು ಎಂದು ಬರೆದುಕೊಂಡಿದ್ದಾರೆ.