ದೇಶದ ಹಿಡಿತ ಉತ್ತರ ಭಾರತೀಯರ ಕೈಯಲ್ಲಿದೆ. ದಕ್ಷಿಣ ಭಾರತಕ್ಕೆ ಪದೇ ಪದೆ ಅನ್ಯಾಯವಾಗುತ್ತದೆ. ಇವತ್ತಿಗೂ ದಕ್ಷಿಣ ಭಾರತ ರಾಜ್ಯಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎನ್ನುವ ಆರೋಪವಿದೆ. ಎರಡು ವರ್ಷಗಳ ಹಿಂದೆ ಸಂಸದರಾಗಿದ್ದ ಡಿಕೆ ಸುರೇಶ್‌ ಕೂಡ ಪ್ರತ್ಯೇಕ ರಾಷ್ಟ್ರದ ಮಾತನ್ನಾಡಿದ್ದರು. ಬಹಳ ಹಿಂದೆಯೇ ಆಂಧ್ರ ಸಿಎಂ, ನಟ ಎನ್‌ಟಿಆರ್‌ ಇಂತಾದೊಂದು ಆಲೋಚನೆ ಮಾಡಿದ್ದರು ಎಂದು ತಮಿಳು ನಟ ಇಳವರಸು ಹೇಳಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ನಟನೆ 'ಲಿಂಗ' ಚಿತ್ರದಲ್ಲಿ ಇಳವರಸು ನಟಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ರಜನಿಕಾಂತ್ ನಮ್ಮ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಎನ್‌ಟಿಆರ್ ತಮ್ಮನ್ನು ಕರೆದು ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಮಾಡುವ ಬಗ್ಗೆ ಚರ್ಚಿಸಿದ್ದ ವಿಷಯ ಕೂಡ ರಜನಿಕಾಂತ್ ಹೇಳಿದ್ದರು ಎಂದು ಇಳವರಸು ನೆನಪಿಸಿಕೊಂಡಿದ್ದಾರೆ. ಚಿತ್ರರಂಗದ ತಾರೆಯರು ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿರುವುದು ಗೊತ್ತೇಯಿದೆ. ಎಂಜಿಆರ್, ಎನ್‌ಟಿಆರ್ ಚಿತ್ರರಂಗದಲ್ಲಿ ಸಿಕ್ಕ ಜನಪ್ರಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿ ಸಿಎಂ ಪಟ್ಟಕ್ಕೇರಿದ್ದರು. ಸದ್ಯ ತಮಿಳು ನಟ ವಿಜಯ್ ಕೂಡ ಚುನಾವಣೆಯಲ್ಲಿ ಗೆದ್ದು ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ.

ಪಕ್ಷ ಕಟ್ಟಿ ಒಂದೇ ವರ್ಷದಲ್ಲಿ ಎನ್‌ಟಿಆರ್ ಅಖಂಡ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು. ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಂತೆ ಬೆಳೆದಿದ್ದರು. ಅದೇ ಸಮಯದಲ್ಲಿ ದಕ್ಷಿಣ ಭಾರತಕ್ಕೆ ನ್ಯಾಯ ಸಿಕ್ತಿಲ್ಲ. ಹಾಗಾಗಿ ಭಾರತವನ್ನು 'ಯುನೆಟೆಡ್ ಸ್ಟೇಟ್ಸ್ ಆಫ್ ಇಂಡಿಯಾ' ಮಾಡುವ ಆಲೋಚನೆ ಮಾಡಿದ್ದರು ಎಂದು ಹೇಳಲಾಗ್ತಿದೆ. ಅದಕ್ಕಾಗಿ ರಜನಿಕಾಂತ್ ಹಾಗೂ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಸೆಳೆಯುವ ಮನಸ್ಸು ಮಾಡಿ ಈ ಬಗ್ಗೆ ಚರ್ಚಿಸಿದ್ದರು ಎಂದು ಇಳವರಸು ತಿಳಿಸಿದ್ದಾರೆ. ಸ್ವತಃ ರಜನಿಕಾಂತ್ ಈ ವಿಚಾರ ನಮ್ಮ ಬಳಿ ಕೇಳಿದ್ದರು ಎಂದು ವಿವರಿಸಿದ್ದಾರೆ.

ಎಂಜಿಆರ್ ನಿಧನದ ಬಳಿಕ ಅನ್ನಿಸುತ್ತೆ. ಎನ್‌ಟಿಆರ್ ಸರ್, ರಜನಿ ಸರ್ ಅವರನ್ನು ಕರೆದು ಮಾತನಾಡಿದ್ದರಂತೆ. ದೇಶವನ್ನು 'ಯುನೆಟೆಡ್ ಸ್ಟೇಟ್ಸ್ ಆಫ್ ಇಂಡಿಯಾ' ಮಾಡ್ಬೇಕು. ಉತ್ತರ ಭಾರತದವರು ನಮ್ಮನ್ನು ಆಳ್ತಿದ್ದಾರೆ. ನಾನು ರಾಜ್‌ಕುಮಾರ್ ಬಳಿ ಮಾತಾಡ್ತೀನಿ, ಪ್ರೇಮ್ ನಜೀರ್ ಬಳಿ ಕೂಡ ಚರ್ಚಿಸ್ತೀನಿ. ತಮಿಳುನಾಡಿನಿಂದ ನೀನು ಬಾ.. ಎಲ್ಲರೂ ಸೇರಿ ಭಾರತವನ್ನು ಇಬ್ಭಾಗ ಮಾಡೋಣ ಬಾ ಎಂದು ಕರೆದ್ರಂತೆ. ಮಧ್ಯಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಸರ್ಕಾರ ರಚಿಸೋಣ.. ಪ್ರತಿ ಐದು ವರ್ಷಕ್ಕೆ ಒಂದೊಂದು ರಾಜ್ಯದಿಂದ ಒಬ್ಬೊಬ್ಬರು ಪ್ರಧಾನಿ ಆಗ್ಬೇಕು ಅಂದ್ರು. ಎನ್‌ಟಿಆರ್ ಕೇಳಿದ್ರು, ನಾನೇ ಒಪ್ಪಲಿಲ್ಲ. ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದು ಹೇಳಿಬಿಟ್ಟೆ ಅಂತ ರಜನಿಕಾಂತ್ ನಮ್ಮ ಬಳಿ ಹೇಳಿದ್ರು" ಎಂದು ಇಳವರಸು ಆ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.

ಪ್ರತ್ಯೇಕ ರಾಜ್ಯದ ರೀತಿ ಪ್ರತ್ಯೇಕ ರಾಷ್ಟ್ರದ ಬಗ್ಗೆ ಎನ್‌ಟಿಆರ್ ಅವತ್ತೇ ಕನಸು ಕಂಡಿದ್ದರು. ಆ ವಿಚಾರವನ್ನೆಲ್ಲಾ ನಮ್ಮ ಬಳಿ ರಜನಿಕಾಂತ್ ಹೇಳಿದ್ದರು ಎಂದು ಇಳವರಸು ಹೇಳಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಡಾ. ರಾಜ್‌ಕುಮಾರ್ ಅವರನ್ನು ರಾಜಕೀಯರಂಗಕ್ಕೆ ಕರೆತರಲು ಸಾಕಷ್ಟು ಜನ ಯತ್ನಿಸಿದ್ರು. ಅದರಲ್ಲಿ ಎನ್‌ಟಿಆರ್ ಕೂಡ ಒಬ್ಬರು ಎನ್ನುವುದು ಈಗ ಗೊತ್ತಾಗ್ತಿದೆ.