ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಮೊದಲ ಭಾಗ ತೆರೆಗ್ಪಳಿಸಿ ಪ್ರೇಕ್ಷಕರನ್ನು ರಂಜಿಸ್ತಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೀತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಆಲಿಯಾ ಭಟ್ 'ರಾಮಾಯಣ' ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ. ಚಿತ್ರೀಕರಣದ ವೇಳೆ ಮಗಳು ರಾಹಾ ಜೊತೆ ರಣ್ಬೀರ್ ಕಾಲ ಕಳೆದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. "ನೀವು(ರಣ್‌ಬೀರ್ ಕಪೂರ್) ಇದಕ್ಕಾಗಿ ನಿಮ್ಮ ಸರ್ವಸ್ವವನ್ನೂ ಧಾರೆ ಎರೆದಿದ್ದೀರಿ, ಆದರೂ ಅವಳಿಗಾಗಿ ಇನ್ನೂ ಸಾಕಷ್ಟು ಉಳಿಸಿಕೊಂಡಿದ್ದೀರಿ. ರಣ್‌ಬೀರ್, ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಹಾಗೆಯೇ, ಈ ಅದ್ಭುತ ಚಲನಚಿತ್ರ ಅನುಭವಕ್ಕಾಗಿ ತಮ್ಮ ಮನಸ್ಸು ಮತ್ತು ಆತ್ಮವನ್ನೇ ಅರ್ಪಿಸಿದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆಯೂ ನನಗೆ ಹೆಮ್ಮೆ ಇದೆ . ಕೆಲವು ಕಥೆಗಳು ನಮ್ಮೆಲ್ಲರಿಗಿಂತಲೂ ದೊಡ್ಡವು. ರಾಮಾಯಣ ಅಂತಹ ಕಥೆಗಳಲ್ಲಿ ಒಂದು" ಎಂದು ಆಲಿಯಾ ಭಟ್ ಬರೆದುಕೊಂಡಿದ್ದಾರೆ.

ಫೋಟೊಗಳಲ್ಲಿ ಶ್ರೀರಾಮನ ಗೆಟಪ್‌ನಲ್ಲಿ ಮಗಳು ರಾಹಾ ಜೊತೆ ರಣ್‌ಬೀರ್ ಕಪೂರ್ ಇರುವುದನ್ನು ನೋಡಬಹುದು. ರಣ್ಬೀರ್ ಪಾದ ಯಾಕೋ ವಿಚಿತ್ರವಾಗಿ ಕಾಣ್ತಿದೆ. ಕಾಲಿಗೆ ಏನೋ ಹಾಕಿಕೊಂಡಂತೆ ಇದೆ. ಚಪ್ಪಲಿ ಅಲ್ಲ. ಬದಲಿಗೆ ಏನೋ ಧರಿಸಿರುವುದು ಗೊತ್ತಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಆದರೆ ಬಹಳ ಹಿಂದೆಯೇ ಈ ಬಗ್ಗೆ ಸಂದರ್ಶನವೊಂದರಲ್ಲಿ ರಣ್‌ಬೀರ್ ಮಾತನಾಡಿದ್ದರು.

ವನವಾಸದ ವೇಳೆ ಅಣ್ಣನ ಭೇಟಿಗೆ ಭರತ ಬರುವುದು ಗೊತ್ತೇಯಿದೆ. ನಾನು ಅಯೋಧ್ಯೆ ರಾಜನಾಗುವುದಿಲ್ಲ. ನಿನ್ನ ಪಾದುಕೆ ಕೊಟ್ಟರೆ ಅದನ್ನೇ ಸಿಂಹಾಸನದ ಮೇಲೆ ಇಟ್ಟು ನಿನ್ನ ಪರವಾಗಿ ನಾನು ರಾಜ್ಯವನ್ನು ಪಾಲನೆ ಮಾಡುತ್ತೇನೆ ಎಂದು ಭರತ ಅಣ್ಣ ಶ್ರೀರಾಮನ ಪಾದುಕೆಗಳನ್ನು ತೆಗೆದುಕೊಂಡು ಹೋಗುತ್ತಾನೆ ಆ ಬಳಿಕ ರಾಮ ಬರಿಗಾಲಿನಲ್ಲೇ ವನವಾಸ ಕಳೆಯುವಂತಾಗುತ್ತದೆ. ಚಿತ್ರೀಕರಣದ ವೇಳೆ ಬರಿಗಾಲಿನಲ್ಲಿ ಇರುವುದು ಕಷ್ಟ ಎನ್ನುವ ಕಾರಣಕ್ಕೆ ರಣ್‌ಬೀರ್ ರಬ್ಬರ್ ಚಪ್ಪಲಿ ಧರಿಸಿದ್ದರು. ಇದರಲ್ಲಿ ಮುಚ್ಚುಮರೆ ಏನಿಲ್ಲ.

ರಾಮಾಯಣ ಸಿನಿಮಾ ಬಗ್ಗೆ 'ಸ್ಕ್ರೀನ್ ರಾಂಟ್' ಸಂದರ್ಶನದಲ್ಲಿ ಮಾತನಾಡುತ್ತಾ ರಣ್‌ಬೀರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. "ಕಥೆಯಲ್ಲಿ ತಮ್ಮ ಪಾತ್ರವು ಚಲನಚಿತ್ರದ ಬಹುಭಾಗದಲ್ಲಿ ಬರಿಗಾಲಲ್ಲೇ ಇರಬೇಕಾದ ಸನ್ನಿವೇಶವೊಂದಿತ್ತು. ಒರಟಾದ ನೆಲದ ಮೇಲೆ ಸಾಹಸ ದೃಶ್ಯಗಳನ್ನು ನಿರ್ವಹಿಸುವುದು ಬಹುತೇಕ ಅಸಾಧ್ಯವಾಗಿತ್ತು. ಬಹುಶಃ ಇದು ಯಾರಿಗೂ ಗೊತ್ತಾಗಲ್ಲ, ಕಾರಣ ತೆರೆಮೇಲೆ ಕಾಣಿಸಲ್ಲ. ಕಥೆಯ ಪ್ರಕಾರ, ರಾಮನ ಪಾದುಕೆಯನ್ನು ಭರತ ಸಿಂಹಾಸನದ ಮೇಲೆ ಇರಿಸುತ್ತಾನೆ. ಹೀಗಾಗಿ, ಚಿತ್ರದ ಬಹುಭಾಗದಲ್ಲಿ ನಾನು ಬರಿಗಾಲಲ್ಲೇ ಇರಬೇಕಿತ್ತು. ಒರಟಾದ ಮೇಲ್ಮೈಗಳ ಮೇಲೆ ಸಾಹಸ ದೃಶ್ಯಗಳನ್ನು ಮಾಡುವಾಗ ಬರಿಗಾಲಿನಲ್ಲಿರುವುದು ತುಂಬಾ ಕಷ್ಟಕರ. ಆದ್ದರಿಂದ, ನಾನು ರಬ್ಬರ್ ಚಪ್ಪಲಿಗಳನ್ನು ಧರಿಸಬೇಕಾಯಿತು" ಎಂದಿದ್ದರು.

'DNEG' ಸಂಸ್ಥೆ ಚಿತ್ರಕ್ಕೆ ವಿಎಫ್‌ಎಕ್ಸ್ ಮಾಡ್ತಿದೆ. ಚಿತ್ರೀಕರಣದ ನಂತರ ಪೋಸ್ಟ್ ಪ್ರೊಡಕ್ಷನ್ ವೇಳೆ ತಂಡ ಈ ಚಪ್ಪಲಿಗಳನ್ನು ಸುಲಭವಾಗಿ ಅಳಿಸಿಬಿಡುತ್ತಾರೆ ಎಂದು ರಣ್‌ಬೀರ್ ವಿವರಿಸಿದ್ದಾರೆ. ರಣ್‌ಬರ್ ಯಾರಿಗೂ ಗೊತ್ತಾಗಲ್ಲ ಎಂದುಕೊಂಡಿದ್ದರು. ಆದರೆ ಆಲಿಯಾ ಭಟ್ ಹಂಚಿಕೊಂಡ ಫೋಟೊದಿಂದ ಅದು ಜಗಜ್ಜಾಹೀರಾಗಿದೆ.