ಧ್ರುವ ಸರ್ಜಾ ಸಿನಿಮಾಗಳು ಯಾವ್ದು ಕೈಗೂಡುತ್ತಿಲ್ಲ. 'ಭರ್ಜರಿ' ಬಳಿಕ ಆಕ್ಷನ್ ಪ್ರಿನ್ಸ್ ಭರ್ಜರಿ ಎನಿಸುವ ಮತ್ತೊಂದು ಸಿನಿಮಾ ಕೊಡಲಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಕನಸು ನನಸಾಗಲಿಲ್ಲ. ಕಳೆದ ವರ್ಷ ಶುರುವಾಗಿದ್ದ ಕ್ರಿಮಿನಲ್ ಸಿನಿಮಾ ನಿಂತೇ ಹೋಯ್ತು. ಒಟ್ಟಿಗೆ ಸಿನಿಮಾ ಮಾಡೋಣ ಎಂದು ಮುಂದೆ ಬಂದಿದ್ದ ದುನಿಯಾ ಸೂರಿ ಕೂಡ ಕೈಕೊಟ್ರು. ಈಗ ಸದ್ದಿಲ್ಲದೇ ಧ್ರುವ ಹೊಸ ಸಿನಿಮಾ ಆರಂಭಿಸಿದ್ದಾರೆ.

ತೆಲುಗು ನಿರ್ದೇಶಕ ಅನಿಲ್ ಕನ್ನೆಗಂಟಿ ಕೂಡ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಕಥೆ ಕೂಡ ಹೇಳಿದ್ದರು. ಇದೆಲ್ಲದರ ನಡುವೆ ನಂದ ಕಿಶೋರ್ ನಿರ್ದೇಶನದ ಮತ್ತೊಂದು ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಪೊಗರು' ಸಿನಿಮಾ ಸೋತಿತ್ತು. ಇದೀಗ ಹೊಸ ಚಿತ್ರಕ್ಕೆ ಮತ್ತೆ ಇಬ್ಬರೂ ಜೊತೆಯಾಗಿದ್ದಾರೆ.

ನಂದ ಕಿಶೋರ್ ಟೈಮ್ ಕೂಡ ಸರಿಯಿಲ್ಲ. 'ಪೊಗರು' ಬಳಿಕ ಕನ್ನಡ 'ರಾಣ' ಸಿನಿಮಾ ಮಾಡಿ ನಿರಾಸೆ ಅನುಭವಿಸಿದರು. ಮೋಹನ್ ಲಾಲ್ ಹೀರೊ ಆಗಿ ಮಾಡಿದ್ದ 'ವೃಷಭ' ಚಿತ್ರ ಕೂಡ ಸೋತಿತ್ತು. ಸದ್ಯ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲು ಅವರು ಸಿದ್ಧತೆ ನಡೆಸಿದ್ದು ಚನ್ನಪಟ್ಟಣದಲ್ಲಿ ಸದ್ದಿಲ್ಲದೇ ಟೀಸರ್ ಚಿತ್ರೀಕರಣ ಮುಗಿಸಿದ್ದಾರೆ. ಅಕ್ಟೋಬರ್ 6ರಂದು ಧ್ರುವ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಲಿದೆ. ಅನಿಲ್ ಕನ್ನೆಗಂಟಿ ನಿರ್ದೇಶನದ ಸಿನಿಮಾ ಬಗ್ಗೆ ಕೂಡ ಅಪ್‌ಡೇಟ್ ಸಿಗಲಿದೆ.

'ಪೊಗರು' ಬಳಿಕ 'ಮಾರ್ಟಿನ್' ಹಾಗೂ 'ಕೆಡಿ' ಸಿನಿಮಾಗಳಲ್ಲಿ ಧ್ರುವ ನಟಿಸಿದ್ದರು. ಬಿಡುಗಡೆಗೆ ಮುನ್ನ ಸದ್ದು ಮಾಡಿದ್ದ ಚಿತ್ರಗಳು ಚಿತ್ರಮಂದಿರದಲ್ಲಿ ಕಮಾಲ್ ಮಾಡಲೇ ಇಲ್ಲ. ಹಾಗಾಗಿ ಧ್ರುವ ಹಾಗೂ ನಂದ ಕಿಶೋರ್ ಇಬ್ಬರಿಗೂ ಒಂದು ಬ್ರೇಕ್ ಬೇಕಿದೆ. ಜಬರ್ದಸ್ತ್ ಟೈಟಲ್ ಜೊತೆ ಒಂದು ಮಾಸ್ ಸಿನಿಮಾ ಮೂಲಕ ಇಬ್ಬರೂ ಮತ್ತೆ ಪ್ರೇಕ್ಷಕರ ಮುಂದೆ ಬರಲು ಕಸರತ್ತು ನಡೆಸಿದ್ದಾರೆ.