ಒಂದ್ಕಡೆ ವಿಜಯಲಕ್ಷ್ಮಿ ಜೊತೆಗಿನ ಕಿರಿಕ್ ಕಾರಣಕ್ಕೆ ದೂರುಗಳು ದಾಖಲಾಗಿ ನಟ ಧನ್ವೀರ್ ಗೌಡ ಸಮಸ್ಯೆಗೆ ಸಿಲುಕಿದ್ದಾರೆ. ಇದೀಗ ಮತ್ತೊಂದು ಕಡೆ ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಪೊಲೀಸರ ಮುಂದೆ ಸುಳ್ಳು ಹೇಳಿ ಈಗ ತಗ್ಲಾಕಿಕೊಂಡಿದ್ದಾರೆ. ಪ್ರಕರಣದ ತನಿಖೆ ವೇಳೆ ಧನ್ವೀರ್ ತಮ್ಮ ಮೊಬೈಲ್ ರಿಸೆಟ್ ಮಾಡಿ ಸಾಕ್ಷ್ಯ ನಾಶಪಡಿಸಿರುವುದು ಎಫ್ಎಸ್ಎಲ್ ವರದಿಯಲ್ಲಿ ಗೊತ್ತಾಗಿದೆ.
ಉಮೇಶ್ ರೆಡ್ಡಿ, ಶಂಕಿತ ಉಗ್ರ ತರುಣ್ ಸೇರಿದಂತೆ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೂವರು ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಅವರೆಲ್ಲಾ ಡ್ಯಾನ್ಸ್ ಮಾಡುತ್ತಾ ರಾಜಾತಿಥ್ಯ ಅನುಭವಿಸುತ್ತಿದ್ದ ವಿಡಿಯೋಗಳು ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಜೈಲು ಸಿಬ್ಬಂದಿ ಹಾಗೂ ಗೃಹ ಇಲಾಖೆ ಕೂಡ ಮುಜುಗರ ಎದುರಿಸುವಂತಾಗಿತ್ತು. ಅಪರಾಧಿಗಳು ಹೀಗೆ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಲು ಅವಕಾಶ ಮಾಡಿಕೊಟ್ಟಿದ್ದು ಯಾರು ಎನ್ನುವ ಚರ್ಚೆ ನಡೆದಿತ್ತು. ಕೆಲ ಸಿಬ್ಬಂದಿ ಸಂಕಷ್ಟ ಎದುರಿಸುವಂತಾಗಿದೆ.
ಅಷ್ಟಕ್ಕೂ ಜೈಲಿನ ಒಳಗಿನ ದೃಶ್ಯಗಳ ವೀಡಿಯೋ ವೈರಲ್ ಆಗಿದ್ದು ಹೇಗೆ ಎನ್ನುವ ಬಗ್ಗೆ ತನಿಖೆಗೆ ಪೊಲೀಸ್ ಇಲಾಖೆ ಮುಂದಾಗಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದರು. ಜೈಲಿನಲ್ಲಿ ದರ್ಶನ್ ಅವರಿಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ, ಆದರೆ ಬೇರೆ ಕೈದಿಗಳು ಹೀಗೆ ರಾಜಾರೋಷವಾಗಿ ಸೌಲಭ್ಯ ಪಡೆದು ಎಂಜಾಯ್ ಮಾಡುತ್ತಿದ್ದಾರೆ ಎಂದು ತೋರಿಸಲು ಧನ್ವೀರ್ ಗೌಡ ಈ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ನನಗೇನು ಗೊತ್ತೇಯಿಲ್ಲ. "ವಕೀಲರೊಬ್ಬರು ವೀಡಿಯೋ ನನಗೆ ಕಳುಹಿಸಿದ್ದರು" ಎಂದಿದ್ದರು. ಸಂಬಂಧಪಟ್ಟ ವಕೀಲರನ್ನು ವಿಚಾರಣೆಗೆ ಒಳಪಡಿಸಿದಾಗ "ನಾನು ಯಾವುದೇ ವೀಡಿಯೋ ಧನ್ವೀರ್ಗೆ ಕಳಿಸಿಲ್ಲ" ಎಂದಿದ್ದರು. ಸಿಸಿಬಿ ಪೊಲೀಸರು ಧನ್ವೀರ್ ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈಗ ವರದಿ ಬಂದಿದ್ದು ಫ್ಯಾಕ್ಟರಿ ರಿಸೆಟ್ ಮಾಡಿ ಧನ್ವೀರ್ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವುದು ಗೊತ್ತಾಗಿದೆ.
ಸದ್ಯ ಧನ್ವೀರ್ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಮತ್ತೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ಸಿದ್ಧತೆ ನಡೆಸಿದ್ದಾರೆ. ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಧನ್ವೀರ್ ಈಗ ದೂರಾಗಿದ್ದಾರೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಮಾನನಷ್ಟ ಮೊಕದ್ದಮೆ ಸಹ ದಾಖಲಿಸಿದ್ದಾರೆ.