ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಮಗ ವಿನೀಶ್ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಮಗನ ಹುಟ್ಟುಹಬ್ಬ ಆಚರಿಸಿ ವಿಜಯಲಕ್ಷ್ಮಿ ಸ್ಪೆಷಲ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿನೀಶ್ ಈ ಹಿಂದಿನ ವರ್ಷಗಳ ಹುಟ್ಟುಹಬ್ಬದ ಫೋಟೊಗಳ ಜೊತೆಗೆ ಫ್ಯಾಮಿಲಿ ಸುಂದರ ಕ್ಷಣಗಳ ಫೋಟೊ, ವಿಡಿಯೋ ಝಲಕ್ ಇದರಲ್ಲಿದೆ.

"ಒಳ್ಳೆ ವ್ಯಕ್ತಿತ್ವ, ಧೈರ್ಯ ಮತ್ತು ದಯಾಗುಣವುಳ್ಳ ವ್ಯಕ್ತಿಯಾಗು. ಜೀವನವು ನಿನಗೆ ಅನೇಕ ಪಾಠಗಳನ್ನು ಕಲಿಸುತ್ತದೆ; ಆದ್ದರಿಂದ ಪ್ರತಿಯೊಂದು ಸವಾಲನ್ನೂ ಶಕ್ತಿಯಿಂದ ಎದುರಿಸು ಮತ್ತು ನಿನ್ನಲ್ಲಿರುವ ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬೇಡ. 18ನೇ ಹುಟ್ಟುಹಬ್ಬದ ಶುಭಾಶಯಗಳು, ವಿನಿಶ್ ಬಂಗಾರು" ಎಂದು ವಿಜಯಲಕ್ಷ್ಮಿ ದರ್ಶನ್ ಬರೆದುಕೊಂಡಿದ್ದಾರೆ.

ಅಭಿಮಾನಿಗಳು ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ನೋಡಿ ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ವಿನೀಶ್ ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಬಾಲನಟನಾಗಿ ವಿನೀಶ್ ಈಗಾಗಲೇ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಮಗನನ್ನು ಹೀರೊ ಆಗಿ ಪರಿಚಯಿಸುವ ಇಂಗಿತವನ್ನು ದರ್ಶನ್ ವ್ಯಕ್ತಪಡಿಸಿದ್ದರು. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ (BGS) ಶಿಕ್ಷಣ ಸಂಸ್ಥೆಯಲ್ಲಿ ವಿನೀಶ್ ದ್ವಿತೀಯ ಪಿಯುಸಿ ಓದುತ್ತಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ವಿನೀಶ್ ಆಕ್ಟೀವ್ ಆಗಿದ್ದಾನೆ. ಇತ್ತೀಚೆಗೆ ದಸರಾ ಹಬ್ಬಕ್ಕೆ ಮನೆಯಲ್ಲಿರುವ ವಾಹನಗಳಿಗೆಲ್ಲಾ ಆತ ಪೂಜೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. 'ಮಿ. ಐರಾವತ' ಚಿತ್ರದ ಕ್ಲೈಮ್ಯಾಕ್ಸ್‌ನ ಚಿಕ್ಕ ಸನ್ನಿವೇಶದಲ್ಲಿ ವಿನೀಶ್ ಮೊದಲ ಬಾರಿ ಕ್ಯಾಮರಾ ಮುಂದೆ ನಿಂತಿದ್ದ. 'ಯಜಮಾನ' ಚಿತ್ರದ 'ಶಿವನಂದಿ' ಹಾಡಿನ ಸಣ್ಣ ಝಲಕ್‌ನಲ್ಲಿ ಕೂಡ ಕಾಣಿಸಿಕೊಂಡಿದ್ದ.