ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷ ಮಗನ ಹುಟ್ಟುಹಬ್ಬವನ್ನು ಕೂಡ ಆಚರಿಸೋಕೆ ಸಾಧ್ಯವಾಗ್ತಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಮಗನ ಹುಟ್ಟುಹಬ್ಬದ ಸಮಯಕ್ಕೆ ಸರಿಯಾಗಿ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದರು. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಅಪ್ಪನ ಅನುಪಸ್ಥಿತಿಯಲ್ಲಿ ವಿನೀಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

ವಿಶೇಷ ವೀಡಿಯೋ ಹಂಚಿಕೊಂಡು ಮಗನಿಗೆ ವಿಜಯಲಕ್ಷ್ಮಿ ದರ್ಶನ್ ಹುಟ್ಟುಹಬ್ಬದ ಶುಭ ಕೋರಿದ್ದರು. ತಂದೆಯನ್ನು ಭೇಟಿ ಮಾಡಲು ಮಗ ವಿನೀಶ್ ತಮ್ಮ ಸಂಬಂಧಿ ಸುಶಾಂತ್ ನಾಯ್ಡು ಜೊತೆ ಜೈಲಿಗೆ ಭೇಟಿ ನೀಡಿದ್ದನು. ಮಗನನ್ನು ಕಂಡು ಅಪ್ಪಿ ತಬ್ಬಿಕೊಂಡ ದರ್ಶನ್ ಜೈಲಿನಲ್ಲಿ ತಮಗೆ ಲಭ್ಯ ಇರುವ ಕಿಟ್‌ಕ್ಯಾಟ್ ಚಾಕೊಲೇಟ್ ಕೊಟ್ಟು ಶುಭ ಕೋರಿ ಆಶೀರ್ವದಿಸಿದ್ದಾರೆ ಎಂದು ವರದಿಯಾಗಿದೆ. ಅಪ್ಪ ಕೊಟ್ಟ ಸರಳವಾದ ಉಡುಗೊರೆಗೆ ವಿನೀಶ್ ಖುಷಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾನೆ.

"ಈ ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಗಿಫ್ಟ್‌ಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ" ಎಂದು ವಿನೀಶ್ ದರ್ಶನ್ ಪೋಸ್ಟ್ ಮಾಡಿರುವುದು ವೈರಲ್ ಆಗ್ತಿದೆ. ಇದೇ ವೇಳೆ ದರ್ಶನ್ "ನಿನಗೆ ಈಗ 18 ವರ್ಷ ತುಂಬಿಗೆ. ಇನ್ಮುಂದೆ ನಿನ್ನ ಬಗ್ಗೆ ಯಾವುದೇ ದೂರುಗಳು ಅಥವಾ ಕಂಪ್ಲೇಂಟ್‌ಗಳು ಬರಬಾರದು. ಜವಾಬ್ದಾರಿಯಿಂದ ನಡೆದುಕೋ" ಎಂದು ಕಿವಿಮಾತು ಹೇಳಿರುವುದಾಗಿ ಹೇಳಲಾಗ್ತಿದೆ. ಕಳೆದ ಎರಡೂವರೆ ವರ್ಷದಿಂದ ದರ್ಶನ್ ಟೈಮೇ ಸರಿ ಇಲ್ಲ. ಒಂದ್ಕಡೆ ರೇಣುಕಾಸ್ವಾಮಿ ಪ್ರಕರಣ ಮತ್ತೊಂದು ಪದೇ ಪದೆ ಆಪ್ತರಿಂದಲೇ ಸಂಕಷ್ಟ ಎದುರಾಗ್ತಿದೆ.

ಇನ್ನು ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದರು. "ಒಳ್ಳೆ ವ್ಯಕ್ತಿತ್ವ, ಧೈರ್ಯ ಮತ್ತು ದಯಾಗುಣವುಳ್ಳ ವ್ಯಕ್ತಿಯಾಗು. ಜೀವನವು ನಿನಗೆ ಅನೇಕ ಪಾಠಗಳನ್ನು ಕಲಿಸುತ್ತದೆ; ಆದ್ದರಿಂದ ಪ್ರತಿಯೊಂದು ಸವಾಲನ್ನೂ ಶಕ್ತಿಯಿಂದ ಎದುರಿಸು ಮತ್ತು ನಿನ್ನಲ್ಲಿರುವ ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬೇಡ. 18ನೇ ಹುಟ್ಟುಹಬ್ಬದ ಶುಭಾಶಯಗಳು, ವಿನಿಶ್ ಬಂಗಾರು" ಎಂದು ಬರೆದುಕೊಂಡಿದ್ದಾರೆ.