ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್‌ ಮಾಫಿ ಸಾಕ್ಷಿ ಆಗಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ದರ್ಶನ್‌ಗೆ ಮತ್ತೆ ಹಿನ್ನಡೆಯಾಗಿದೆ. ಈ ವಿಚಾರದಲ್ಲಿ ಬಹುತೇಕ ಎಲ್ಲಾ ದಾರಿಗಳು ಮುಚ್ಚಿದಂತಾಗಿದೆ. ಪ್ರದೋಷ್ ಮಾಫಿ ಸಾಕ್ಷಿ ಆಗಿರುವುದನ್ನು ಪ್ರಶ್ನಿಸಿ, ದರ್ಶನ್ ಪರ ಪತ್ನಿ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿದ್ದರು. ಅದನ್ನು ಇಂದು(ಸೆಪ್ಟೆಂಬರ್ 23) ಹೈಕೋರ್ಟ್ ವಜಾ ಮಾಡಿದೆ.

ಪ್ರದೋಷ್ ಮಾಫಿ ಸಾಕ್ಷಿಯಾಗಲು 59ನೇ ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶವನ್ನು ಇದೀಗ ಹೈಕೋರ್ಟ್ ಎತ್ತಿ ಹಿಡಿದಿರುವುದು ದರ್ಶನ್‌ಗೆ ನುಂಗಲಾರದ ತುತ್ತಾಗಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕ್ರಾಸ್ ಎಗ್ಸಾಮಿನೇಷನ್ ವೇಳೆ ಪ್ರದೋಷ್‌ನ ಕೂಡ ಪ್ರಶ್ನಿಸಬಹುದು. ಹಾಗಾಗಿ 59ನೇ ಸಿಸಿಹೆಚ್ ಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಇಲ್ಲ ಎಂದು ತಿಳಿಸಿದೆ.

ಪ್ರದೋಷ್ ತಮ್ಮ ಪತ್ನಿ ಜೊತೆ ಫೋನ್‌ನಲ್ಲಿ ರಹಸ್ಯವಾಗಿ ಮಾತನಾಡುತ್ತಿದ್ದರು. ಆಕೆಯ ಮೂಲಕ ಇತರರನ್ನು ಸಂಪರ್ಕಿಸಿದ್ದಾರೆ. ಪ್ರದೋಷ್ ಪತ್ನಿ ಕೂಡ ಬೇರೆಯವರ ಜೊತೆ ಮಾತನಾಡಿದ್ದು ಆ ಬಳಿಕ ಆತನ ಮನಸ್ಥಿತಿ ಬದಲಾಗಿದೆ. ಯಾವುದೋ ಪ್ರಭಾವಕ್ಕೆ ಒಳಗಾಗಿ ದುರುದ್ದೇಶದಿಂದ ಮಾಫಿ ಸಾಕ್ಷಿಯಾಗಿ ಪ್ರದೋಷ್ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್‌ ಮೊಬೈಲ್‌ ಸಂಖ್ಯೆ ದುರ್ಬಳಕೆ ಪ್ರಕರಣ ತನಿಖೆ ಮುಗಿಯುವವರೆಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ತಡೆಹಿಡಿಯಬೇಕೆಂಬ ದರ್ಶನ್‌ ಪರ ವಕೀಲ ಹಷ್ಮತ್‌ ಪಾಷಾ ವಾದವನ್ನು ಹೈಕೋರ್ಟ್ ತಿರಸ್ಕರಿಸಿತು. ಯಾವುದೇ ಹಂತದಲ್ಲಾದರೂ ಆರೋಪಿ ಮಾಫಿ ಸಾಕ್ಷಿಯಾಗಿ ಅವಕಾಶ ಕೋರಲು ಅವಕಾಶವಿದೆ. ಅದನ್ನು ಪ್ರಶ್ನಿಸುವ ಹಕ್ಕು ಸಹ ಆರೋಪಿಗೆ ಇಲ್ಲ ಎಂದು ಕೋರ್ಟ್ ಹೇಳಿದೆ.