ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ರಮ್ಯಾ ಮಾತನಾಡಿದ್ದು ಅದಕ್ಕೆ ದರ್ಶನ್ ಫ್ಯಾನ್ಸ್ ಗರಂ ಆಗಿದ್ದು ಗೊತ್ತೇಯಿದೆ. ನಟಿ ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡಿದ್ದ ಪ್ರಕರಣ ಭಾರೀ ಸದ್ದು ಮಾಡಿತ್ತು. ಈ ಸಂಬಂಧ ಆಕೆ ನೀಡಿದ ದೂರು ಆಧರಿಸಿ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಿದ್ದರು. ಇದೀಗ ಆರೋಪಿಗಳು ನಟಿ ರಮ್ಯಾ ಕಾಲು ಹಿಡಿದು ಕ್ಷಮೆ ಕೇಳಿದ್ದಾರೆ. ಆದರೂ ಆಕೆ ಅದಕ್ಕೆ ಕರಗಿಲ್ಲ ಎಂದು ವರದಿಯಾಗಿದೆ.
ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪಿಗಳು ನಟಿ ರಮ್ಯಾ ಕಾಲು ಹಿಡಿದು ಕ್ಷಮಿಸಿ ದೂರು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಇದು ಪಾಠವಾಗಬೇಕು ಎನ್ನುವ ಕಾರಣಕ್ಕೆ ತಾನು ದೂರು ಹಿಂಪಡೆಯುವುದಿಲ್ಲ ಎಂದು ರಮ್ಯಾ ಹೇಳಿದ್ದಾರೆ. ಈ ಹಿಂದೆ ಕೂಡ ಆರೋಪಿಗಳು ಹಾಗೂ ಅವರ ಪೋಷಕರು ಪ್ರಕರಣ ಇತ್ಯರ್ಥಗೊಳಿಸುವಂತೆ ರಮ್ಯಾ ಅವರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ.
ಆರೋಪಿಗಳ ಮನವಿಯನ್ನು ನಟಿ ರಮ್ಯಾ ಮತ್ತೊಮ್ಮೆ ತಿರಸ್ಕರಿಸಿದ್ದಾರೆ. ಕಾಲು ಹಿಡಿದು ಕೇಳಿಕೊಂಡರೂ ಕ್ಷಮಿಸುವುದಿಲ್ಲ ಎಂದಿದ್ದಾರೆ. "ಮೊಬೈಲ್ ಇದೆ, ಇಂಟರ್‌ನೆಟ್ ಇದೆ ಎಂದು ಯಾರ ಬಗ್ಗೆ ಹೇಗೆ ಬೇಕಾದರೂ ಕಾಮೆಂಟ್ ಹಾಕಬಹುದಾ? ನಾನು ದೂರು ಹಿಂಪಡೆಯುವ ಮಾತೇ ಇಲ್ಲ. ಕೋರ್ಟ್ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ನಾನು ಬರ್ತೀನಿ. ಆದರೆ ನಾನು ಯಾರನ್ನೂ ಕ್ಷಮಿಸಲ್ಲ. ಈ ಘಟನೆ ಎಲ್ಲರಿಗೂ ಒಳ್ಳೆ ಪಾಠ ಆಗಬೇಕು. ಮುಂದೆ ಯಾರೇ ಆಗಲಿ ಹೆಣ್ಣು ಮಕ್ಕಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮುನ್ನ ಯೋಚಿಸಬೇಕು" ಎಂದು ರಮ್ಯಾ ಹೇಳಿದ್ದಾರೆ.
ಕಳೆದ ವರ್ಷ ರೇಣುಕಾಸ್ವಾಮಿ ಪ್ರಕರಣ ಸಂಬಂಧ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದ ವಿಚಾರವಾಗಿ ಸುಪ್ರೀಂ ಕೋರ್ಟ್ ಆಕ್ರೋಶ ಹೊರಹಾಕಿತ್ತು. ಈ ಬಗ್ಗೆ ಪ್ರಕಟವಾಗಿರುವ ವರದಿಯೊಂದನ್ನ ನಟಿ ರಮ್ಯಾ ಪೋಸ್ಟ್ ಮಾಡಿ "ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ" ಬರೆದುಕೊಂಡಿದ್ದರು. ಇದು ದರ್ಶನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆಕೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದರು. ನೇರವಾಗಿ ಆಕೆಯ ಇನ್‌ಸ್ಟಾಗ್ರಾಮ್‌ಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಾಮೆಂಟ್ ಮಾಡಿದ್ದರು.
ಅಶ್ಲೀಲ ಕಾಮೆಂಟ್‌ಗಳನ್ನು ಸ್ಕ್ರೀನ್ ಶಾಟ್ ಸಮೇತ ನಟಿ ರಮ್ಯಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಈ ಸಂಬಂಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಕೆಲ ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಮುಂದುವರೆದಿದೆ.