ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಭವಿಷ್ಯ ಏನಾಗುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ದಿನದಿಂದ ದಿನಕ್ಕೆ ಪ್ರಕರಣದ ನಾನಾ ತಿರುವು ಪಡೆದುಕೊಂಡು ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಮಾಫಿ ಸಾಕ್ಷಿ ದಾಖಲಿಸುವಂತೆ ಪ್ರದೋಷ್‌ಗೆ ನ್ಯಾಯಾಲಯ ದಿನಾಂಕ ನಿಗದಿಪಡಿಸಿದೆ. ಅಂದೇ ದರ್ಶನ್ ಭವಿಷ್ಯ ಏನಾಗಬಹುದು ಎನ್ನುವ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.

ಪ್ರಕರಣದ ಆರೋಪಿಯಾಗಿರುವ ಪ್ರದೋಷ್ ಮಾಫಿ ಸಾಕ್ಷಿ (ಅಪ್ರೂವರ್) ಆಗಲು ಒಪ್ಪಿದ್ದಾರೆ. ಇದು ದರ್ಶನ್ ಪಾಳಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸದಂತೆ ಮಾಡಲು ದರ್ಶನ್ ಮಾಡಿದ ಪ್ರಯತ್ನ ಎಲ್ಲವೂ ವಿಫಲವಾಗಿದೆ. ಹೈಕೋರ್ಟ್‌ನಲ್ಲಿ ಕೂಡ ಇದಕ್ಕೆ ಹಿನ್ನಡೆಯಾಗಿತ್ತು. 59ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಸಮನ್ಸ್ ಜಾರಿ ಮಾಡಿ ಸೆಪ್ಟೆಂಬರ್ 28ರಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವಂತೆ ಆದೇಶ ನೀಡಿದ್ದಾರೆ.

ಪ್ರಕರಣದ ಆರೋಪಿ ಆಗಿರುವ ಪ್ರದೋಷ್ ಸ್ವತಃ ಸಾಕ್ಷ್ಯ ನುಡಿಯಲು ಮುಂದಾಗಿರುವುದು ಕುತೂಹಲ ಮೂಡಿಸಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ತಮಗೆ ಗೊತ್ತಿರುವ ಎಲ್ಲಾ ವಿಚಾರಗಳನ್ನು ಆತ ನ್ಯಾಯಾಲಯದ ಮುಂದೆ ಹೇಳುವ ಸಾಧ್ಯತೆಯಿದೆ. ಪ್ರಕರಣದಲ್ಲಿ ತನ್ನ ಪಾತ್ರ ಹಾಗೂ ಇನ್ನುಳಿದವರ ಪಾತ್ರ ಏನೇನು ಎಂದು ಸ್ಪಷ್ಟ ಚಿತ್ರಣ ತೆರೆದಿಡಲಿದ್ದಾರೆ. ಅದನ್ನು ಆಧರಿಸಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಪ್ರದೋಷ್ ಹೇಳಿಕೆ ಬಹಳ ಮಹತ್ವ ಪಡೆದುಕೊಂಡಿದೆ. ಇದು ಅಂತಿಮ ತೀರ್ಪಿನ ಮೇಲೆ ಬಹಳ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸದಂತೆ ದರ್ಶನ್‌ ಕೋರ್ಟ್ ಮೆಟ್ಟಿಲೇರಿದ್ದರು.