ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರೋಪಿಯಾಗಿ ಎರಡು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುವಂತಾಗಿದೆ. ಸಹ ಆರೋಪಿ ಪ್ರದೋಷ್ ಈಗ ಮಾಫಿ ಸಾಕ್ಷಿ ಆಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ದರ್ಶನ್ ಬೇಗ ಸಂಕಷ್ಟದಿಂದ ಪಾರಾಗಿ ಬರಬೇಕು ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. 'ಬಾಸ್​​ ಮೇಲೆ ಕರುಣೆ ತೋರಿ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದರ್ಶನ್ ಅಭಿಮಾನಿಗಳು ಬರೆದಿರುವ ಪತ್ರ ವೈರಲ್ ಆಗ್ತಿದೆ.

ಸೆಪ್ಟೆಂಬರ್ 28ರಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವಂತೆ 59ನೇ ಸಿಸಿಹೆಚ್ ಕೋರ್ಟ್ ಹೇಳಿದೆ. ಪ್ರಕರಣದಲ್ಲಿ ದರ್ಶನ್ ಭವಿಷ್ಯ ಏನಾಗುತ್ತದೆ ಎನ್ನುವುದು ಅಂದು ಬಹುತೇಕ ನಿರ್ಧಾರವಾಗುವ ಸಾಧ್ಯತೆಯಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸದಂತೆ ದರ್ಶನ್ ಮಾಡಿದ ಪ್ರಯತ್ನ ಎಲ್ಲವೂ ವಿಫಲವಾಗಿದೆ. ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಸಹ ವಜಾ ಆಗಿದೆ. ಇದೆಲ್ಲದರ ನಡುವೆ ಅಭಿಮಾನಿಗಳ ಮನವಿ ಪತ್ರ ಸದ್ದು ಮಾಡ್ತಿದೆ.

ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ರಾಷ್ಟ್ರಪತಿಗೆ ಬರೆದ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದು ನಿಜಕ್ಕೂ ನೆಚ್ಚಿನ ನಟನ ಮೇಲಿನ ಕಾಳಜಿಯಿಂದ ಬರೆದ ಪತ್ರವೋ ಇಲ್ಲ ಪ್ರಚಾರದ ಗಿಮಿಕ್ಕಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಪತ್ರದ ಸಾರಾಂಶ

"ಗೌರವಾನ್ವಿತ ದೌಪದಿ ಮೇಡಂ ಅವರೇ, ನಮ್ಮ ಕರ್ನಾಟಕದ ಹೆಮ್ಮೆಯ ನಟ D Boss ದರ್ಶನ್ ಸರ್ ಅವರು ಈಗ ಸಂಕಷ್ಟದಲ್ಲಿದ್ದಾರೆ. ಅವರು ಕನ್ನಡ ನಾಡಿನ ಕೋಟ್ಯಾಂತರ ಅಭಿಮಾನಿಗಳಿಗೆ ದೇವರ ಸಮಾನ. ಮೇಡಂ, ಭಾರತಡ ಕಾನೂನು ಮತ್ತು ನ್ಯಾಯಾಲಯದ ಮೇಲೆ ನಮಗೆ 100% ನಂಬಿಕೆ ಇದೆ. ನಾವು ಕಾನೂನನ್ನು ಗೌರವಿಸುತ್ತೇವೆ. ಆದರೆ ಒಬ್ಬ ತಾಯಿಯಾಗಿ, ದಯವಿಟ್ಟು ನಮ್ಮ D Boss ಅವರ ಪ್ರಕರಣವನ್ನು ಮಾನವೀಯ ದೃಷ್ಟಿಯಿಂದ ನೋಡಿ. ಅವರ ಆರೋಗ್ಯ, ಅವರ ಕುಟುಂಬ, ಅವರನ್ನು ನಂಬಿರುವ ಕೋಟ್ಯಾಂತರ ಅಭಿಮಾನಿಗಳನ್ನು ಪರಿಗಣಿಸಿ, ಕಾನೂನಿನ ಪ್ರಕಾರ ಏನು ನ್ಯಾಯವೋ ಅದು ಸಿಗಲಿ, ಆದರೆ ಆದಷ್ಟು ಬೇಗ ನ್ಯಾಯ ಸಿಗುವಂತೆ ತಮ್ಮ ಕಡೆಯಿಂದ ಸಾಧ್ಯವಾದ ಸಹಾಯ ಮಾಡಬೇಕೆಂದು ತಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇವೆ" ಎಂದು ಬರೆಯಲಾಗಿದೆ. D Boss ಅಭಿಮಾನಿಗಳು, ಕರ್ನಾಟಕ ಎಂದು ಸಹಿ ಮಾಡಲಾಗಿದೆ.