ನಿರ್ಮಾಪಕ, ನಿರ್ದೇಶಕ ಆರ್. ಚಂದ್ರು ನೇತೃತ್ವದ ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ 'ಫಾದರ್' ಸಿನಿಮಾ ನಿರ್ಮಾಣವಾಗಿದೆ. ಯಮುನ ಚಂದ್ರು ಅವರು ನಿರ್ಮಿಸಿರುವ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ತಂದೆ- ಮಗನಾಗಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಣ ಸಂಸ್ಥೆ ಆರ್ ಸಿ ಸ್ಟುಡಿಯೋಸ್ ಘೋಷಣೆ ಮಾಡಿದ್ದು, ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
'ಫಾದರ್' ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಆರ್. ಚಂದ್ರು ತಮ್ಮದೇ ಆದ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಈ ಸಂಸ್ಥೆಯ ಮೊದಲ ಚಿತ್ರವಾಗಿ 'ಫಾದರ್' ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರಕ್ಕೆ ರಾಜಮೋಹನ್ ಆಕ್ಷನ್ ಕಟ್ ಹೇಳಿದ್ದಾರೆ.
ಟೈಟಲ್‌ಗೆ ತಕ್ಕಂತೆ ಇದು ತಂದೆ - ಮಗನ ಬಾಂಧವ್ಯದ ಚಿತ್ರ. ಮ್ಯಾಕೀಸ್ ಸಂಸ್ಥೆ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಕುಟುಂಬ, ಭಾವನೆಗಳು ಮತ್ತು ಸಂಬಂಧಗಳ ಸುತ್ತ ಸಾಗುವ ಕಥಾಹಂದರ ಹೊಂದಿರುವ ಚಿತ್ರದ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವಂತಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಇದೊಂದು ಭಾವನಾತ್ಮಕ ಅನುಭವವಾಗಲಿದೆ ಎಂದು ಚಿತ್ರತಂಡ ಭರವಸೆಯಿಂದ ಕಾಯ್ತಿದೆ.
ಆರ್. ಚಂದ್ರು ಈಗಾಗಲೇ ಶಿವರಾಜ್‌ಕುಮಾರ್ 'ಒರಿಜಿನಲ್ ಮಾನ್‌ಸ್ಟರ್' ಚಿತ್ರವನ್ನು ಆರಂಭಿಸಿದ್ದಾರೆ. ಸದ್ದಿಲ್ಲದೇ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗ್ತಿದೆ.