ಮೂರು ತಿಂಗಳ ಹಿಂದೆ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಮುದ್ದಾಗ ಮಗನನ್ನು ಸ್ವಾಗತಿಸಿದ್ದರು. ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲಿ ಇಬ್ಬರ ಮದುವೆ ನಡೆದಿತ್ತು. ಇದೀಗ ಮಗನಿಗೆ ನಾಮಕರಣ ಮಾಡಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲೇ ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮಗನ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ಧನಂಜಯ್ ತಮ್ಮ ಮಗನಿಗೆ 'ಎರೆಯ' ಎಂದು ಹೆಸರಿಟ್ಟಿದ್ದು ಅದರ ಅರ್ಥವನ್ನು ತಿಳಿಸಿದ್ದಾರೆ. ಮಗನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. "ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮನ್ನ ಪ್ರೀತಿಸುವ ಜೀವಗಳು, ಮಗನನ್ನ ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತ ಇದ್ರಿ, ಏನು ಹೆಸರು ಅಂತ ಕೇಳ್ತ ಇದ್ರಿ. ಹಬ್ಬದ ದಿನ, ಇವತ್ತು ಪರಿಚಯಿಸುತ್ತ ಇದೀವಿ" ಬರೆದುಕೊಂಡಿದ್ದಾರೆ.

ಎರೆಯ | EREYA... 'ಎರೆಯ'— ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ. ಇದರ ಅರ್ಥ "ಒಡೆಯ, ಸ್ವಾಮಿ, ಅಧಿಪತಿ" — ಒಂದು ಕಾಲದಲ್ಲಿ ರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಬಳಸುತ್ತಿದ್ದ ಹೆಸರು. ಇತಿಹಾಸದ ಪುಟಗಳಲ್ಲಿ, ಚಾಲುಕ್ಯರ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ Ereya ಎಂಬ ಹೆಸರು ಕಾಣಿಸುತ್ತದೆ.. ಆ ರಾಜರ , ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಬದುಕಿನ ಪುಟ್ಟ ಅಧಿಪತಿ… ನಮ್ಮ ಹೃದಯದ ರಾಜ… ನಮ್ಮ "ಎರೆಯ" ಎಂದು ತಿಳಿಸಿದ್ದಾರೆ.