ಬ್ರೇಕಪ್ ಆಗುವುದು ಸುಲಭ. ಆದ್ರೆ ಮತ್ತೆ ಒಂದಾಗಿ ಬಾಳುವುದೇ ಕಷ್ಟ. ಸೆಲೆಬ್ರೆಟಿಗಳ ಲೈಫ್‌ನಲ್ಲಿ ಲವ್, ಬ್ರೇಕಪ್ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ ಒಮ್ಮೆ ದೂರಾದವರು ಮತ್ತೆ ಕೂಡಿ ಬಾಳುವುದು ಸುಲಭ ಅಲ್ಲ. ಭಾರತೀಯ ಕ್ರಿಕೆಟಿಗ ಪೃಥ್ವಿ ‍ಷಾ ಹಾಗೂ ನಟಿ ಆಕೃತಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದು ಬಳಿಕ ಬ್ರೇಕಪ್ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು. ಆದರೆ ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ.

ಮಾರ್ಚ್ 8, 2026 ರಂದು ನಿಶ್ಚಿತಾರ್ಥ ಪೃಥ್ವಿ ‍ಷಾ ಹಾಗೂ ನಟಿ ಆಕೃತಿ ಅಗರ್‌ವಾಲ್ ಜೋಡಿ ಎಂಗೇಜ್‌ಮೆಂಟ್ ನಡೆದಿತ್ತು. ನಾಲ್ಕೈದು ತಿಂಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ದೂರಾಗಲು ನಿರ್ಧರಿಸಿದ್ದರು. ನಿಶ್ಚಿತಾರ್ಥವನ್ನು ಮುರಿದುಕೊಳ್ಳುತ್ತಿದ್ದೇವೆ ಎಂದು ನಟಿ ಆಕೃತಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಹಾಗಾಗಿ ಇಬ್ಬರೂ ಮದುವೆ ಆಗುವುದಿಲ್ಲ ಎನ್ನಲಾಗಿತ್ತು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ನಮ್ಮಿಬ್ಬರ ನಡುವೆ ಯಾವುದೇ ಜಗಳ ಇಲ್ಲ. ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದಿದ್ದಾರೆ.

"ಒಂದು ವೈಯಕ್ತಿಕ ಸ್ಪಷ್ಟನೆ.. ನಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಾಗ, ನಮ್ಮ ಸಂಬಂಧದ ಬಗ್ಗೆ ನಮಗಿಂತ ಹೆಚ್ಚು ತಿಳಿದಿದೆ ಎಂದು ಭಾವಿಸಿದ್ದ ಆಪ್ತರ ಅಭಿಪ್ರಾಯಗಳಿಗೆ ಮಣಿದು, ನನ್ನ ಭಾವಿ ಸಂಗಾತಿ ಮತ್ತು ನಮ್ಮ ಸಂಬಂಧವನ್ನು ನಾನು ತಪ್ಪಾಗಿ ನೋಡುವಂತಾಗಿತ್ತು. ನಾನು ದಾರಿತಪ್ಪಿದ್ದೆ. ಅವರೊಟ್ಟಿಗೆ ಮಾತನಾಡದೇ ಆ ನಿರ್ಧಾರವನ್ನು ತೆಗೆದುಕೊಂಡಿದ್ದೆ ಎಂದು ಈಗ ನನಗೆ ಅನ್ನಿಸುತ್ತಿದೆ. ಆ ನಿರ್ಧಾರ ಮತ್ತು ಅದರಿಂದ ಉಂಟಾದ ನೋವಿನ ಸಂಪೂರ್ಣ ಹೊಣೆಗಾರಿಕೆಯನ್ನು ನಾನು ವಹಿಸಿಕೊಳ್ಳುತ್ತೇನೆ" ಎಂದು ನಟಿ ಆಕೃತಿ ಹೇಳಿದ್ದಾರೆ.

ಬಳಿಕ ನಾವು ಮುಕ್ತವಾಗಿ ಮಾತನಾಡಿದ್ದೇವೆ, ಪರಸ್ಪರರನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಮತ್ತೆ ಒಂದಾಗಲು ನಿರ್ಧರಿಸಿದ್ದೇವೆ ಎಂದು ಆಕೃತಿ ತಿಳಿಸಿದ್ದಾರೆ. "ನಾವು ಒಬ್ಬರಿಗೊಬ್ಬರು ಸಾಕು, ನಮಗೆ ಬೇರೆ ಯಾರ ಅಗತ್ಯವೂ ಇಲ್ಲ. ಈ ಬಾರಿ, ನಮ್ಮ ಪರಸ್ಪರ ತಿಳುವಳಿಕೆ, ನಂಬಿಕೆ ಮತ್ತು ಪ್ರೀತಿಯೇ ನಮ್ಮ ಭವಿಷ್ಯವನ್ನು ರೂಪಿಸಬೇಕೆಂದು ನಾನು ಬಯಸುತ್ತೇನೆ. ನಾವು ಹೊಸದಾಗಿ ಆರಂಭಿಸುತ್ತಿರುವ ಈ ಹಂತದಲ್ಲಿ, ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ" ಎಂದು ನಟಿ ಆಕೃತಿ ಮನವಿ ಮಾಡಿದ್ದಾರೆ.

ಲಕ್ನೋ ಮೂಲಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಕೃತಿ ಅಗರ್‌ವಾಲ್ ನಟಿಯಾಗಿ ಕೂಡ ಗುರ್ತಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಮತ್ತೊಂದು ಕಡೆ ಪೃಥ್ವಿ ಷಾ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.