ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 13 ಯಶಸ್ವಿಯಲ್ಲಿ ಎರಡು ವಾರ ಪೂರೈಸಿದೆ. ಈ ಬಾರಿ 16 ಮಂದಿ ದೊಡ್ಮನೆ ಒಳಗೆ ಹೋಗಿದ್ದರು. ಅಗ್ನಿ ಪರೀಕ್ಷೆ ಮೂಲಕ ಗೆದ್ದ ನಾಲ್ವರು ಕಾಮನ್‌ಮ್ಯಾನ್‌ಗಳು ಇದರಲ್ಲಿ ಇದ್ದಾರೆ. ಮೊದಲ ವಾರ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಓಂ ಪ್ರಕಾಶ್ ರಾವ್ ಕೂಡ ಹೊರ ಬಂದಿದ್ದಾರೆ.
ಎರಡನೇ ವಾರಾಂತ್ಯದ ಪಂಚಾಯ್ತಿ ಕೂಡ ನಡೀತಿದೆ. ತಪ್ಪು ಮಾಡಿದವರಿಗೆ ಕಿಚ್ಚ ಚಾಟಿ ಬೀಸಿದ್ದಾರೆ. ಕನ್ನಡದ ಜನತೆಗೆ ಕಿಚ್ಚ ವಾರದ ಚಪ್ಪಾಳೆ ಕೊಟ್ಟಿದ್ದಾರೆ. ಈ ವಾರ ಎಲಿಮಿನೇಷನ್ ಇರಲ್ಲ ಎನ್ನಲಾಗ್ತಿದೆ. ಆದರೆ ಮುಂದಿನ ವಾರದ ನಡುವೆಯೇ ಒಬ್ಬರು ಮನೆಯಿಂದ ಹೊರಬರುವ ಲೆಕ್ಕಾಚಾರ ಶುರುವಾಗಿದೆ. ಇದೆಲ್ಲದರ ನಡುವೆ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಇರುತ್ತೆ ಎನ್ನಲಾಗ್ತಿದೆ. ಇನ್ನೆರಡು ದಿನಗಳಲ್ಲಿ ಒಬ್ಬರು ಮನೆ ಒಳಗೆ ಹೋಗ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
'ಗಿಚ್ಚಿ ಗಿಲಿಗಿಲಿ' ಶೋ ಖ್ಯಾತಿಯ ಹಾಸ್ಯನಟ ಪ್ರಶಾಂತ್ ಗೌಡ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ದೊಡ್ಮನೆ ಒಳಗೆ ಹೋಗ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅರೇ ಎರಡು ವಾರಕ್ಕೆ ವೈಲ್ಡ್ ಕಾರ್ಡ್ ಎಂಟ್ರಿನಾ? ಎನ್ನುವ ಅನುಮಾನ ಕೆಲವರಿಗೆ ಕಾಡುತ್ತಿದೆ. ಇಬ್ಬರು ಮನೆಯಿಂದ ಹೊರ ಬಂದ ಮೇಲೆ 14 ಜನ ಮಾತ್ರ ಅಲ್ಲಿದ್ದಾರೆ. ಮೂರ್ನಾಲ್ಕು ಜನ ವೈಲ್ಡ್ ಕಾರ್ಡ್ ಮೂಲಕ ಒಳಗೆ ಹೋಗುವ ಸಾಧ್ಯತೆಯಿದೆ. ಅದರಲ್ಲಿ ಪ್ರಶಾಂತ್ ಗೌಡ ಮೊದಲಿಗರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೆ ಪ್ರಶಾಂತ್ ಗೌಡ ಮದುವೆ ಆಗಿದ್ದರು. ನಟಿ ಕೃತಿ ಗೌಡ ಜೊತೆ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಕಿರುತೆರೆ ತಾರೆಯರು ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. 15 ದಿನಗಳ ಹಿಂದೆ ಜೋಡಿ ವಿಯೆಟ್ನಾಂಗೆ ಹನಿಮೂನ್ ಹೋಗಿ ಬಂದಿದ್ದರು. ಇದೆಲ್ಲದರ ನಡುವೆ ಪ್ರಶಾಂತ್ ಗೌಡ ಈಗ ಬಿಗ್‌ಬಾಸ್ ಮನೆಗೆ ಹೋಗ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದು ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದನ್ನು ಕಾದು ನೋಡಬೇಕಿದೆ.
ಇತ್ತೀಚೆಗೆ ಪ್ರಶಾಂತ್ ಗೌಡ ತಮ್ಮ ಪತ್ನಿಗೆ ಐಫೋನ್ 18 Pro ಉಡುಗೊರೆಯಾಗಿ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಪತ್ನಿಗೆ ಫೋನ್ ಕೊಡಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಗಿಚ್ಚಿ ಗಿಲಿಗಿಲಿ' ಶೋ 3 ಸೀಸನ್‌ಗಳಲ್ಲಿ ಪ್ರಶಾಂತ್ ಮಿಂಚಿದ್ದರು. 'ಕ್ವಾಟ್ಲೆ ಕಿಚನ್' ಹಾಗೂ 'ಬಾಯ್ಸ್ vs ಗರ್ಲ್ಸ್' ಶೋಗಳಲ್ಲಿ ಕೂಡ ಕಾಮಿಡಿ ಮಾಡಿ ಮೋಡಿ ಮಾಡುವ ಪ್ರಯತ್ನ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಪ್ರಶಾಂತ್ ಗೌಡ ಆಕ್ಟೀವ್ ಆಗಿದ್ದಾರೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..