ತೆಲುಗಿನ 'ದಿ ಪ್ಯಾರಡೈಸ್' ಚಿತ್ರಕ್ಕೆ ಭಾರೀ ಹಿನ್ನಡೆಯಾಗಿದೆ. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಗಿಟ್ಟಿಸಿಕೊಂಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕುಂಟುವಂತಾಗಿದೆ. ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್ ಕಾರಣಕ್ಕೆ ಕರ್ನಾಟಕದಲ್ಲೂ ಒಳ್ಳೆ ಓಪನಿಂಗ್ ಸಿಕ್ಕಿತ್ತು. ಆದರೆ ಬಳಿಕ ಮಿಶ್ರಪ್ರತಿಕ್ರಿಯೆ ಸಿಕ್ಕಿ ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಕನ್ನಡದ 'ಸಿಟಿಲೈಟ್ಸ್' ಎದುರು 'ದಿ ಪ್ಯಾರಡೈಸ್' ಮಂಕಾಗಿದೆ.
ಸಣ್ಣ ಬಜೆಟ್‌ನಲ್ಲಿ ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಸಿನಿಮಾ ರಾಜ್ಯದಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿದೆ. 8ನೇ ದಿನವೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಬೆಂಗಳೂರಿನಲ್ಲಿ ಎರಡನೇ ವಾರ ಕೂಡ 120 ಶೋಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಈ ವಾರ 'ದಿ ಪ್ಯಾರಡೈಸ್' ಸಿನಿಮಾ ಕೆಲವೆಡೆ 'ಸಿಟಿಲೈಟ್ಸ್' ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿತ್ತು. ಒಂದೇ ದಿನದಲ್ಲಿ ಅದು ತಲೆಕೆಳಗಾಗಿದೆ. ಮತ್ತೆ 'ದಿ ಪ್ಯಾರಡೈಸ್' ಸಿನಿಮಾ ತೆಗೆದು ಕನ್ನಡದ 'ಸಿಟಿಲೈಟ್ಸ್' ಸಿನಿಮಾ ಹಾಕಿದ್ದಾರೆ.
ನಗರದ ತಾವರೆಕೆರೆಯ ಬಾಲಾಜಿ ಚಿತ್ರಮಂದಿರದಲ್ಲಿ 'ಪ್ಯಾರಡೈಸ್' ಚಿತ್ರಕ್ಕಾಗಿ 'ಸಿಟಿಲೈಟ್ಸ್' ಚಿತ್ರ ದಾರಿ ಮಾಡಿಕೊಟ್ಟಿತ್ತು. ಆದರೆ 'ಪ್ಯಾರಡೈಸ್' ಕಲೆಕ್ಷನ್ ಇಲ್ಲದೇ ಇರುವುದರಿಂದ ಕೆಲ ಮೂರು ಶೋಗಳನ್ನು ಮತ್ತೆ 'ಸಿಟಿಲೈಟ್ಸ್' ಚಿತ್ರಕ್ಕೆ ಕೊಡುವಂತಾಗಿದೆ. ಒಟ್ಟಾರೆ ಎರಡನೇ ವಾರವೂ ವಿನಯ್, ಮೋನಿಷಾ ಜೋಡಿಯ ಸಿನಿಮಾ ಸದ್ದು ಮಾಡ್ತಿದೆ. ಪರಭಾಷೆಯ ದೊಡ್ಡ ಸಿನಿಮಾಗಳ ಎದುರು ಕನ್ನಡದ ಸಣ್ಣ ಸಿನಿಮಾಗಳು ಸದ್ದು ಮಾಡ್ತಿರುವುದು ಇದೇ ಮೊದಲಲ್ಲ.
ಮೊದಲಿನಿಂದಲೂ ಪರಭಾಷೆಯ ಸಿನಿಮಾ ರಾಜ್ಯದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿ ಸದ್ದು ಮಾಡುತ್ತವೆ. ಬಾಕ್ಸಾಫೀಸ್ ಕ್ಲ್ಯಾಶ್ ಆಗಿ ಕನ್ನಡ ಚಿತ್ರಗಳು ಸಂಕಷ್ಟ ಎದುರಿಸಿರುವುದು ಇದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾಗಿ ಇದು ಮತ್ತಷ್ಟು ಹೆಚ್ಚಾಗಿತ್ತು. ಆದರೆ ಒಳ್ಳೆ ಸಿನಿಮಾ ಮಾಡಿದ್ರೆ ಯಾವುದೇ ಚಿತ್ರಕ್ಕೆ ಹೆದರಬೇಕಾದ ಅವಶ್ಯಕತೆ ಇಲ್ಲ. ಕನ್ನಡ ಪ್ರೇಕ್ಷಕರು ಕೈಬಿಡಲ್ಲ ಎನ್ನುವುದು 'ಸಿಟಿಲೈಟ್ಸ್' ಮೂಲಕ ಮತ್ತೆ ಸಾಬೀತಾಗಿದೆ. ಮೊದಲ ವಾರ ಸಿನಿಮಾ 5 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.