ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಸಿನಿಮಾ ಯಶಸ್ವಿಯಾಗಿ ಒಂದು ವಾರ ಪೂರೈಸಿದೆ. ಪ್ರೇಕ್ಷಕರ ಮೆಚ್ಚುಗೆ ಜೊತೆಗೆ ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ವಿನಯ್ ರಾಜ್‌ಕುಮಾರ್ ಹಾಗೂ ಮೊನಿಷಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಮಾಸ್ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದು ಚಿತ್ರದ ಕಲೆಕ್ಷನ್ ಕೂಡ ಚೆನ್ನಾಗಿದೆ.
ವಿಜಯ್ ಸ್ವತಃ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದೆ. ಶಿವಸೇನಾ ಛಾಯಾಗ್ರಹಣ ಹಾಗೂ ಮಾಸ್ತಿ ಸಂಭಾಷಣೆ ಚಿತ್ರದ ಗತ್ತು ಹೆಚ್ಚಿಸಿದೆ. ಒಟ್ಟಾರೆ 'ಸಿಟಿಲೈಟ್ಸ್' ಹಿಟ್ ಸಿನಿಮಾ ಎನಿಸಿಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ನಡುವೆ ಇಂತಾದೊಂದು ಗೆಲುವು ಚಿತ್ರರಂಗಕ್ಕೆ ಅವಶ್ಯಕತೆ ಇತ್ತು.
ಮೊದಲ ವಾರದ ಕಲೆಕ್ಷನ್
ದೊಡ್ಡ ಸಿನಿಮಾಗಳಿಗೆ ಹೋಲಿಸಿದರೆ 'ಸಿಟಿಲೈಟ್ಸ್' ಚಿತ್ರದ ಕಲೆಕ್ಷನ್ ಕೊಂಚ ಕಮ್ಮಿ ಅನ್ನಿಸದೇ ಇರದು. ಆದರೂ ಬಜೆಟ್‌ಗೆ ತಕ್ಕಂತೆ ಸಿನಿಮಾ ಉತ್ತಮ ಗಳಿಕೆ ಕಂಡಿದೆ. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. 7 ದಿನಕ್ಕೆ ಚಿತ್ರ 5.15 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವೆಬ್‌ಸೈಟ್ ವರದಿ ಮಾಡಿದೆ. ಅಂದಾಜು 3-4 ಕೋಟಿ ರೂ. ಬಜೆಟ್ ಸಿನಿಮಾ ಇದಾಗಿದ್ದು ಮುಂದೆ ಚಿತ್ರದ ಭವಿಷ್ಯ ಏನಾಗುತ್ತೆ ಕಾದು ನೋಡಬೇಕು.
ಯಶಸ್ವಿ ಪ್ರದರ್ಶನ
ತೆಲುಗಿನ 'ದಿ ಪ್ಯಾರಡೈಸ್' ಸೇರಿ ಒಂದಷ್ಟು ಸಿನಿಮಾಗಳು ಈ ವಾರ ತೆರೆಗೆ ಬಂದಿದೆ. ಆದರೂ 'ಸಿಟಿಲೈಟ್ಸ್' ಹೊಳಪು ಕಮ್ಮಿ ಆಗಿಲ್ಲ. ಬೆಂಗಳೂರು ನಗರದಲ್ಲಿ 'ಸಿಟಿಲೈಟ್ಸ್' ಎರಡನೇ ವಾರವೂ 120 ಶೋಗಳಲ್ಲಿ ಸಿನಿಮಾ ಪ್ರದರ್ಶನ ಮುಂದುವರಿಸಿದೆ. ನಿಧಾನವಾಗಿ ಮತ್ತಷ್ಟು ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿದ್ದಾರೆ.