ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ನಟನೆಯ ಮಾಸ್ ಆಕ್ಷನ್ ಥ್ರಿಲ್ಲರ್ 'ಸಿಟಿಲೈಟ್ಸ್' ಸಿನಿಮಾ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರು ಬಹುಪರಾಕ್ ಎನ್ನುತ್ತಿದ್ದಾರೆ. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬುಕ್‌ಮೈಶೋನಲ್ಲಿ ಅದು ಗೊತ್ತಾಗುತ್ತಿದೆ. ರಾಜ್ಯಾದ್ಯಂತ ಸಿನಿಮಾ ಮೊದಲ ದಿನ ಉತ್ತಮ ಗಳಿಕೆ ಕಂಡಿದೆ.

'ಸಲಗ' ಹಾಗೂ 'ಭೀಮ' ಸಿನಿಮಾಗಳನ್ನು ನಿರ್ದೇಶಿಸಿ ನಟಿಸಿ ವಿಜಯ್ ಈ ಬಾರಿ ನಿರ್ದೇಶನ ಮಾತ್ರ ಮಾಡಿದ್ದಾರೆ. ವಿನಯ್ ಜೊತೆಗೆ ತಮ್ಮ ಮಗಳು ಮೋನಿಷಾಗೆ ಅವಕಾಶ ಕೊಟ್ಟಿದ್ದರು. ಇನ್ನುಳಿದಂತೆ ಹೊಸ ಕಲಾವಿದರನ್ನು ಬಳಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಮಿಂಚಿದ್ದಾರೆ. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಹಾಗೂ ಶಿವಸೇನಾ ಛಾಯಾಗ್ರಹಣ ಚಿತ್ರದ ತಾಖತ್ತು ಹೆಚ್ಚಿಸಿದೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಸಿನಿಮಾ ಕಟ್ಟಿಕೊಟ್ಟು ವಿಜಯ್ ಸಕ್ಸಸ್ ಕಂಡಿದ್ದಾರೆ.

ನಿನ್ನೆ (ಸೆಪ್ಟೆಂಬರ್ 18) 'ಸಿಟಿಲೈಟ್ಸ್' ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಮಧ್ಯಾಹ್ನದ ವೇಳೆಗೆ ಸಿನಿಮಾ ನೋಡಿದವರು ಮೆಚ್ಚಿಕೊಂಡು ಪ್ರತಿಕ್ರಿಯೆ ಹಂಚಿಕೊಂಡಿದ್ದರು. ಸಂಜೆ ವೇಳೆಗೆ ಕೆಲವೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಒಂದೆರಡು ಶೋಗಳು ಹೌಸ್‌ಫುಲ್ ಆಗಿ ಸದ್ದು ಮಾಡಿತ್ತು. ಒಳ್ಳೆ ಸಿನಿಮಾ ಮಾಡಿದ್ರೆ ಕಂಡಿತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವುದು ಮತ್ತೆ ಸಾಬೀತಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ದರ್ಬಾರ್ ನಡೆಸುತ್ತೆ ಕಾದು ನೋಡಬೇಕಿದೆ.

ಮೊದಲ ದಿನದ ಕಲೆಕ್ಷನ್

'ಸಿಟಿಲೈಟ್ಸ್' ಸಿನಿಮಾ ಮೊದಲ ದಿನ 80 ಲಕ್ಷ ರೂ. ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಚಿತ್ರತಂಡ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ. ವಿನಯ್ ರಾಜ್‌ಕುಮಾರ್ ವೃತ್ತಿ ಜೀವನದಲ್ಲಿ ಇದು ಹೆಚ್ಚು ಎಂದು ಚರ್ಚೆ ನಡೀತಿದೆ. ಅಂದಾಜು 3 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಭಾನುವಾರ ಚಿತ್ರಕ್ಕೆ ನಿರ್ಣಾಯಕವಾಗಲಿದೆ. ಈ ವರ್ಷ ಕನ್ನಡ ಚಿತ್ರಗಳ ಸಾಧನೆ ಹೇಳಿಕೊಳ್ಳುವಂತಿಲ್ಲ. 'ಟಾಕ್ಸಿಕ್' ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಹಾಗಾಗಿ ಸಣ್ಣ ಬಜೆಟ್ ಸಿನಿಮಾಗಳೇ ಬೆಸ್ಟ್ ಎನ್ನುವಂತಾಗಿದೆ.

ಮಾಸ್ ಪ್ರೇಕ್ಷಕರಿಗೆ ಹಬ್ಬ

ದುನಿಯಾ ವಿಜಯ್ ಅಭಿಮಾನಿಗಳಿಗೆ 'ಸಿಟಿಲೈಟ್ಸ್' ಸಿನಿಮಾ ಇಷ್ಟವಾಗಿದೆ. ಅವರ ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಒಂದಷ್ಟು ನ್ಯೂನ್ಯತೆಗಳ ನಡುವೆಯೂ ಸಿನಿಮಾ ನೋಡಿಸಿಕೊಳ್ಳುತ್ತಿದೆ. ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಆವರೇಜ್, ಒಮ್ಮೆ ನೋಡಬಹುದಾದ ಸಿನಿಮಾ ಎನ್ನುವ ಕಾಮೆಂಟ್ಸ್ ಕೂಡ ಬರ್ತಿದೆ. ರೌಡಿಸಂ ಜೊತೆಗೆ ವೇಶ್ಯಾವಾಟಿಕೆ, ಲಿಂಗ ಪರಿವರ್ತನೆ ಮಾಡಿಕೊಂಡವರನ್ನು ಸಮನಾಗಿ ನೋಡಿ, ಹೀಗೆ ಸಾಕಷ್ಟು ಸಂದೇಶವನ್ನು ಚಿತ್ರ ಹೊತ್ತು ಬಂದಿದೆ. ಮುಖ್ಯವಾಗಿ ಮೆಜೆಸ್ಟಿಕ್ ಸುತ್ತಮುತ್ತಲ ಜೀವನದ ವಿಚಾರಗಳನ್ನು ಎಳೆಎಳೆಯಾಗಿ ಕಟ್ಟಿಕೊಡಲಾಗಿದೆ. ಅದೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ.

'ಸಿಟಿಲೈಟ್ಸ್' ಟ್ರೆಂಡಿಂಗ್

ಬುಕ್‌ಮೈ ಶೋ ಆಪ್‌ನಲ್ಲಿ 'ಸಿಟಿಲೈಟ್ಸ್' ಸಿನಿಮಾ ಟ್ರೆಂಡಿಂಗ್‌ ಆಗ್ತಿದೆ. ಕಳೆದ 24 ಗಂಟೆಗಳಲ್ಲಿ 15 ಸಾವಿರ ಟಿಕೆಟ್ ಬುಕ್ ಆಗಿದೆ. ಗಂಟೆಗೆ ಸಾವಿರಕ್ಕೂ ಅಧಿಕ ಟಿಕೆಟ್ ಸೇಲ್ ಆಗ್ತಿದೆ. ಟ್ರೆಂಡ್ ಹೀಗೆ ಮುಂದುವರೆದರೆ ಭಾನುವಾರ ಸಿನಿಮಾ ಗಳಿಕೆ ಮತ್ತಷ್ಟು ಹೆಚ್ಚಾಗಲಿದೆ.