ವಿನಯ್ ರಾಜ್‌ಕುಮಾರ್ ನಟನೆಯ 'ಸಿಟಿಲೈಟ್ಸ್' ಸಿನಿಮಾ ಫಸ್ಟ್ ವೀಕೆಂಡ್ ಯಶಸ್ವಿ ಪ್ರದರ್ಶನ ಕಂಡಿದೆ. ಕಡಿಮೆ ಬಜೆಟ್‌ನಲ್ಲಿ ಚಿಕ್ಕದಾಗಿ ಮಾಡಿರುವ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಮಾಸ್ ಆಡಿಯನ್ಸ್ ದುನಿಯಾ ವಿಜಯ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ದಿನಕ್ಕಿಂತ ಎರಡು ಹಾಗೂ ಮೂರನೇ ದಿನ ಚಿತ್ರದ ಗಳಿಕೆ ಚೆನ್ನಾಗಿದೆ.

ಸಂಜೆ ಶೋಗಳು ಹೌಸ್‌ಫುಲ್ ಆಗ್ತಿದೆ. 'ಸಿಟಿಲೈಟ್ಸ್' ಚಿತ್ರತಂಡ ಕೂಡ ಕೆಲವು ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಕೆಲಸ ಮಾಡ್ತಿದೆ. ಮಹಿಳಾ ಪ್ರೇಕ್ಷಕರು ಕೂಡ ಸಿನಿಮಾ ನೋಡಲು ಬರ್ತಿರುವುದು ಸಂತಸದ ವಿಷಯ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ರಿವ್ಯೂಸ್ ಪಡೆದುಕೊಂಡು ಸಿನಿಮಾ ಮುನ್ನುಗ್ಗುತ್ತಿದೆ. ದೊಡ್ಡ ಸಿನಿಮಾಗಳ ರೀತಿ ಕೋಟಿ ಕೋಟಿ ಅಲ್ಲೇ ಇದ್ದರೂ ಒಳ್ಳೆ ಮೊತ್ತವನ್ನು ಸಿನಿಮಾ ಗಳಿಸುತ್ತಿದೆ.

3ನೇ ದಿನದ ಕಲೆಕ್ಷನ್

ಅಧಿಕೃತವಾಗಿ ಚಿತ್ರತಂಡ ಕಲೆಕ್ಷನ್ ಬಗ್ಗೆ ಲೆಕ್ಕ ಕೊಟ್ಟಿಲ್ಲ. ಭಾನುವಾರ 'ಸಿಟಿಲೈಟ್ಸ್' ಸಿನಿಮಾ 1.23 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ sacnilk.com ವೆಬ್‌ಸೈಟ್ ವರದಿ ಮಾಡಿದೆ. ಶುಕ್ರವಾರ 80 ಲಕ್ಷ ರೂ. ಹಾಗೂ ಶನಿವಾರ 99 ಲಕ್ಷ ರೂ. ಗಳಿಕೆ ಮಾಡಿದ್ದಾಗಿ ಹೇಳಲಾಗ್ತಿದೆ.

ಫಸ್ಟ್ ವೀಕೆಂಡ್ ಗಳಿಕೆ

ಅಂದಾಜು 3-4 ಕೋಟಿ ರೂ. ಬಜೆಟ್‌ನಲ್ಲಿ 'ಸಿಟಿಲೈಟ್ಸ್' ಸಿನಿಮಾ ನಿರ್ಮಾಣವಾಗಿರುವ ಅಂದಾಜಿದೆ. ಮೊದಲ ಮೂರು ದಿನಕ್ಕೆ ಒಟ್ಟು 3.38 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 3.02 ನೆಟ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಸಣ್ಣ ಚಿತ್ರಕ್ಕೆ ಇದು ಒಳ್ಳೆ ಗಳಿಕೆ ಎನ್ನುವಂತಾಗಿದೆ. ವಿನಯ್ ಸಿನಿಮಾಗಳಲ್ಲೇ ಬಹಳ ಒಳ್ಳೆ ಓಪನಿಂಗ್ ಈ ಸಿನಿಮಾ ಪಡೆದುಕೊಂಡಿದೆ.

ಸೋಮವಾರ ಪರೀಕ್ಷೆ ?

ಯಾವುದೇ ಸಿನಿಮಾ ಫಲಿತಾಂಶ ಗೊತ್ತಾಗಬೇಕು ಅದ್ರೆ ಫಸ್ಟ್ ವೀಕೆಂಡ್ ಕಳೆದು ಸೋಮವಾರ ಬರಬೇಕು. ವಾರದ ದಿನದಲ್ಲೂ ಜನ ಸಿನಿಮಾ ನೋಡಲು ಮುಂದಾದರೆ ಅದು ಹಿಟ್ ಎನಿಸಿಕೊಳ್ಳುತ್ತದೆ. ಹಾಗಾಗಿ 'ಸಿಟಿಲೈಟ್ಸ್' ಸಿನಿಮಾ ನಾಲ್ಕನೇ ದಿನ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.