ಸ್ಟಾರ್ ನಟರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ನಾನಾ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಚಿತ್ರವೊಂದಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ನಟರು ಅದನ್ನು ಮತ್ತಷ್ಟು ಬೆಳೆಸಲು ಸಿನಿಮಾ ಕಾಂಪ್ಲೆಕ್ಸ್, ರಿಯಲ್ ಎಸ್ಟೇಟ್, ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುತ್ತಾರೆ. ವಿಕ್ಟರಿ ವೆಂಕಟೇಶ್, ಮಹೇಶ್ ಬಾಬು, ಅಲ್ಲು ಅರ್ಜುನ್ ಬಳಿಕ ಇದೀಗ ತೆಲುಗು ನಟ ಚಿರಂಜೀವಿ ಕೂಡ ಸಿನಿಮಾ ಮಲ್ಟಿಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಹೈದರಾಬಾದ್‌ನಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ಪರದೆ ಇರುವ ಮಲ್ಟಿಪ್ಲೆಕ್ಸ್ ಕಟ್ಟಲು ಸಜ್ಜಾಗಿದ್ದಾರೆ. ಟಾಲಿವುಡ್‌ನ ಪ್ರಮುಖ ಚಿತ್ರ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕರಾಗಿದ್ದು, 'ಏಷ್ಯನ್ ಗ್ರೂಪ್' ಮತ್ತು 'ಏಷ್ಯನ್ ಸಿನಿಮಾಸ್'ನ ಮುಖ್ಯಸ್ಥ ಸುನಿಲ್ ನಾರಂಗ್ ಜೊತೆ ಸೇರಿ ಮಲ್ಟಿಪ್ಲೆಕ್ಸ್ ಸ್ಥಾಪನೆಗೆ ಚಿರಂಜೀವಿ ಮುಂದಾಗಿದ್ದಾರೆ. ಜರ್ಮನಿಯ ಲಿಯಾನ್‌ಬರ್ಗ್‌ನಲ್ಲಿರುವ 'ಟ್ರಾಮ್‌ಪಾಲಸ್ಟ್ ಲಿಯಾನ್‌ಬರ್ಗ್ ಥಿಯೇಟರ್'ನಲ್ಲಿ ಪ್ರಪಂಚದ ಅತಿದೊಡ್ಡ ಪರದೆ(127 ಅಡಿ × 69 ಅಡಿ) ಚಿತ್ರಮಂದಿರವಿದೆ. ಅದಕ್ಕಿಂತಲೂ ದೊಡ್ಡ ಸ್ಕ್ರೀನ್ ಹೈದರಾಬಾದ್‌ನಲ್ಲಿ ಬರುತ್ತಾ ಕಾದು ನೋಡಬೇಕಿದೆ.
ಲಿಯಾನ್‌ಬರ್ಗ್ ಥಿಯೇಟರ್ ಬಿಟ್ಟರೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಐಮ್ಯಾಕ್ಸ್ ಸ್ಕ್ರೀನ್ (105 ಅಡಿ × 75 ಅಡಿ) ಎರಡನೇ ಸ್ಥಾನದಲ್ಲಿದೆ. ಸದ್ಯ ಹೈದರಾಬಾದ್‌ನ ಪ್ರಸಾದ್ಸ್ ಮಲ್ಟಿಪ್ಲೆಕ್ಸ್ (PCX) ನಲ್ಲಿರುವ ಪರದೆಯು (101.6 ಅಡಿ ಅಗಲ ಮತ್ತು 64 ಅಡಿ) ಭಾರತದಲ್ಲಿ ಅತಿ ದೊಡ್ಡ ಪರದೆ ಎನ್ನಲಾಗ್ತಿದೆ. ಅದನ್ನು ಮೀರಿಸುವಂತಹ ಪರದೆ ಇರುವ ಮಲ್ಟಿಪ್ಲೆಕ್ಸ್ ಚಿರಂಜೀವಿ ನಿರ್ಮಿಸುತ್ತಾರೆ ಎನ್ನಲಾಗ್ತಿದೆ.
'ಏಷ್ಯನ್ ಚಿರಂಜೀವಿ ಸಿನಿಮಾಸ್' (ACC) ಅಥವಾ 'ಏಷ್ಯನ್ ಮೆಗಾಸ್ಟಾರ್ ಸಿನಿಮಾಸ್' (AMC) ಹೆಸರಿನಲ್ಲಿ ಮಲ್ಟಿಪ್ಲೆಕ್ಸ್ ಚೈನ್ ಆರಂಭವಾಗಬಹುದು ಎಂದು ವರದಿಯಾಗಿದೆ. ಹೈದರಾಬಾದ್‌ನ ಯಾವ ಸ್ಥಳದಲ್ಲಿ ಈ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ನಿರ್ಮಣವಾಗುತ್ತೆ ? ಎಷ್ಟು ಸ್ಕ್ರೀನ್‌ಗಳು ಇರುತ್ತದೆ. ಯಾವಾಗ ಉದ್ಘಾಟನೆ ಆಗುತ್ತದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ 'ವಿಶ್ವಂಭರ' ಹಾಗೂ 'ಕಾಕ' ಎಂಬ ಸಿನಿಮಾಗಳಲ್ಲಿ ಚಿರು ನಟಿಸ್ತಿದ್ದಾರೆ.