ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ಮಿಸಿರುವ 'ಲಕ್ಷ್ಮಿಪುತ್ರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ಎಸ್. ಸ್ವಾಮಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿಕ್ಕಣ್ಣ ಹೀರೊ ಆಗಿ ನಟಿಸಿರುವ ಎರಡನೇ ಸಿನಿಮಾ ಇದು. ಅವರ ತಾಯಿ ಪಾತ್ರದಲ್ಲಿ ತಾರಾ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಇತ್ತೀಚೆಗೆ ಶಿವಣ್ಣ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ಹಳ್ಳಿ ಹುಡುಗನ ಗೆಟಪ್‌ನಲ್ಲಿ ಚಿಕ್ಕಣ್ಣ ಮಿಂಚಿದ್ದು ವಂದಿತಾ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಮಿತ್ರ, ಶಿವರಾಜ್ ಕೆ.ಆರ್. ಪೇಟೆ, ಧರ್ಮಣ್ಣ, ಕುರಿ ಪ್ರತಾಪ್ ಸೇರೆ ದೊಡ್ಡ ಹಾಸ್ಯ ಕಲಾವಿದರು ದಂಡು 'ಲಕ್ಷ್ಮಿಪುತ್ರ' ಚಿತ್ರದಲ್ಲಿದೆ. ನವೆಂಬರ್ 27ರಂದು ಸಿನಿಮಾ ತೆರೆಗಪ್ಪಳಿಸಲಿದೆ. "ಇದು ಕೇವಲ ಕಾಮಿಡಿ ಅಥವಾ ಕಮರ್ಷಿಯಲ್ ಸಿನಿಮಾವಲ್ಲ, ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಜೀವನದಲ್ಲಿ ನಡೆಯುವ ನೈಜ ಘಟನೆಗಳ ಕಥೆ. ಪ್ರೀತಿ, ಸ್ನೇಹ, ತಾಯಿ-ಮಗನ ಬಾಂಧವ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದೃಶ್ಯ ಕನೆಕ್ಟ್ ಆಗುತ್ತದೆ ಎಂದು ಚಿಕ್ಕಣ್ಣ ಹೇಳಿದ್ದಾರೆ.

"ಚಿಕ್ಕಣ್ಣ ಅವರ ಹಾಸ್ಯದಲ್ಲಿ ಆಡಂಬರವಿಲ್ಲ, ಬಹಳ ಸಟಲ್ ಆಗಿ ನಟಿಸುತ್ತಾರೆ. ಬರೆದಿಟ್ಟುಕೊಳ್ಳಿ, ಎರಡ್ಮೂರು ವರ್ಷಗಳಲ್ಲಿ ಚಿಕ್ಕಣ್ಣ ದೊಡ್ಡ ಸೂಪರ್ ಸ್ಟಾರ್ ಆಗ್ತಾರೆ" ಎಂದು ಶಿವರಾಜ್‌ಕುಮಾರ್ ಭವಿಷ್ಯ ನುಡಿದಿದ್ದಾರೆ. ಎ.ಪಿ ಅರ್ಜುನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಜೊತೆ ಸೇರಿ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದಾರೆ.

ಟ್ರೈಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದೆ ಸಾಕಷ್ಟು ಹಳ್ಳಿ ಸೊಗಡಿನ ಸಿನಿಮಾಗಳಲ್ಲಿ ಇರುವಂತಹ ಸನ್ನಿವೇಶಗಳೇ ಚಿತ್ರದಲ್ಲಿದೆ. 10 ವರ್ಷಗಳ ಹಿಂದೆ ಬರಬೇಕಿದ್ದ ಸಿನಿಮಾ ಇದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.