ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಹೀರೊ ಆಗಿ ನಟಿಸಿರುವ 'ಲಕ್ಷ್ಮಿಪುತ್ರ' ಚಿತ್ರದ 'ಐ ಲವ್ ಯೂ ಪರಿಮಳ' ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಕ್ಯಾಚಿ ಟ್ಯೂನ್ ಹಾಗೂ ಸಾಹಿತ್ಯದಿಂದ ಕೂಡಿರುವ ಈ ಹಾಡಿಗೆ ಖ್ಯಾತ ಗಾಯಕ ನವೀನ್ ಸಜ್ಜು ಧ್ವನಿಯಾಗಿದ್ದು, ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ.

ಖ್ಯಾತ ನಿರ್ದೇಶಕ ಎಪಿ. ಅರ್ಜುನ್ ಜೊತೆ ರವಿಕಿರಣ್ ಎಂ. ಗೌಡ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದು, ನಿರ್ದೇಶಕರ ಜೊತೆಗೂಡಿ ಸ್ವತಃ ಎ.ಪಿ. ಅರ್ಜುನ್ ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ರಚನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪ್ರಶಾಂತ್ ರಾಜಪ್ಪ ಹಾಗೂ ವಿಜಯ್‌ ಈಶ್ವರ್ ಸಂಭಾಷಣೆ 'ಲಕ್ಷ್ಮಿಪುತ್ರ' ಚಿತ್ರಕ್ಕಿದೆ.

'ಲಕ್ಷ್ಮಿಪುತ್ರ' ಚಿತ್ರದಲ್ಲಿ ಚಿಕ್ಕಣ್ಣ ಜೋಡಿಯಾಗಿ ವಂದಿತಾ ಗೌಡ ಕಾಣಿಸಿಕೊಂಡಿದ್ದು, ಹಿರಿಯ ನಟಿ ತಾರಾ ಅನುರಾಧ, ಹಾಸ್ಯ ನಟರಾದ ಕುರಿ ಪ್ರತಾಪ್, ಧರ್ಮಣ್ಣ ಕಡೂರು, ಮಿತ್ರ ಹಾಗೂ ಮನು ಮುಂತಾದ ಕಲಾವಿದರ ತಾರಾಗಣವಿದೆ. ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ, ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಇದೇ ನವೆಂಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಲಕ್ಷ್ಮಿಪುತ್ರ' ಚಿತ್ರಅದ್ದೂರಿಯಾಗಿ ಬಿಡುಗಡೆಯಾಗಲಿದೆ.

'ಐ ಲವ್ ಯೂ' ಸಾಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಸಿಕ್ಕಾಪಟ್ಟೆ ಸ್ಟೈಲಿಶ್ ಅವತಾರದಲ್ಲಿ ಚಿಕ್ಕಣ್ಣ ಮಿಂಚಿದ್ದಾರೆ. ಬಿಂದಾಸ್ ಆಗಿ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ. ಲಂಗಾ ದಾವಣಿಯಲ್ಲಿ ನಾಯಕಿ ವಂದಿತಾ ಗೌಡ ಕಾಣಿಸಿಕೊಂಡಿದ್ದಾರೆ. ಹಳ್ಳಿ ಸೊಗಡಿನ ಸಿನಿಮಾ ಇದು ಎನ್ನುವುದು ಗೊತ್ತಾಗ್ತಿದೆ. ಕಾಲೇಜು ವಿದ್ಯಾರ್ಥಿ ಪರಿಮಳ ಹಿಂದೆ ಬೀಳುವ 'ಲಕ್ಷ್ಮಿಪುತ್ರ'ನ ಕಥೆಯಿದು.