ಪ್ರತಿವಾರ ಚಿತ್ರಮಂದಿರಗಳಲ್ಲಿ ಎರಡ್ಮೂರು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತವೆ. ಕೆಲವೊಮ್ಮೆ ಆ ಸಂಖ್ಯೆ 10 ದಾಟಿರುವುದು ಇದೆ. ಆದರೆ ಇದೇ ಮೊದಲ ಬಾರಿಗೆ ಬರೋಬ್ಬರಿ 44 ಕನ್ನಡ ಸಿನಿಮಾಗಳು ಒಮ್ಮೆಲೆ ಬಿಡುಗಡೆ ಆಗುತ್ತಿವೆ.
ನವೆಂಬರ್ 27ರಂದು ಕನ್ನಡ ಚಿತ್ರರಂಗದಲ್ಲಿ ಚಿತ್ರೋತ್ಸವ ನಡೀತಿದೆ. ಏಕಾಏಕಿ 40ಕ್ಕೂ ಹೆಚ್ಚು ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಬಹುತೇಕ ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ಯಾರಿಗೂ ಗೊತ್ತಿಲ್ಲ. ಯಾವುದೇ ಪ್ರಚಾರ ಇಲ್ಲದೇ ಸಣ್ಣ ಸಣ್ಣ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ. ಚಿಕ್ಕಣ್ಣ ನಟನೆಯ 'ಲಕ್ಷ್ಮಿಪುತ್ರ' ಸಿನಿಮಾ ಮಾತ್ರ ಕೊಂಚ ನಿರೀಕ್ಷೆ ಹುಟ್ಟಿಸಿದೆ.
'ಗುರುತ್ವಾಕರ್ಷಣೆ', '1979', 'ಬೆಲ್ ಬಟನ್', 'ಕಾಖಂಡಕಿ ಶ್ರೀಮಹಿಪತಿ ದಾಸರು', 'ಅನಂತ ಪಯಣ', 'ರಿಲ್ಯಾಕ್ಸ್', 'ಮಿತ್ರರಕ್ಷಕ' ಹೀಗೆ ಒಂದಷ್ಟು ಸಿನಿಮಾಗಳ ಹೆಸರು ಮಾತ್ರ ಹೇಳಬಹುದು. ಇನ್ನುಳಿದ 38 ಸಿನಿಮಾಗಳ ಹೆಸರು ಕೂಡ ಗೊತ್ತಿಲ್ಲ. ಪ್ರತಿವರ್ಷ ಕನ್ನಡದಲ್ಲಿ ನೂರಾರು ಸಿನಿಮಾಗಳು ನಿರ್ಮಾಣ ಆಗುತ್ತವೆ. ದೊಡ್ಡ ಸಿನಿಮಾಗಳಿಗೆ ಹೆದರಿ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. ಯಾವುದೇ ದೊಡ್ಡ ಸಿನಿಮಾ ಇಲ್ಲ ಎಂದು ಗೊತ್ತಾದಾಗ ಒಮ್ಮೆಲೆ ಬಿಡುಗಡೆಗೆ ಮನಸ್ಸು ಮಾಡುತ್ತಾರೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಹೆದರಿ ಕೆಲ ದಿನ ಕನ್ನಡದ ಯಾವುದೇ ಸಣ್ಣ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಬಳಿಕ 'ಪ್ರೇಮದ ಊರಲಿ' ಸಿನಿಮಾ ಹವಾ ಶುರುವಾಯಿತು. ನಡುವೆ 'ಜೈಲರ್'-2 ಆರ್ಭಟ ಜೋರಾಯ್ತು. ಇತ್ತೀಚೆಗೆ 'ರಾಮಾಯಣ' ಸಿನಿಮಾ ದರ್ಬಾರ್ ಆರಂಭವಾಗಿದ್ದು ಗೊತ್ತೇಯಿದೆ. ಹೀಗೆ ಕಳೆದ ಎರಡ್ಮೂರು ತಿಂಗಳಲ್ಲಿ ದೊಡ್ಡ ಸಿನಿಮಾಗಳ ಆರ್ಭಟ ಹೆಚ್ಚಾಗಿ ಸಣ್ಣ ಸಿನಿಮಾಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಚಿತ್ರಮಂದಿರಗಳು ಸಿಗುತ್ತಿರಲಿಲ್ಲ. ಈಗ ದೊಡ್ಡ ಸಿನಿಮಾಗಳ ಅಬ್ಬರ ಕಮ್ಮಿ ಆಗಿದ್ದು ಕೊಂಚ ಉಸಿರಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಒಟ್ಟಿಗೆ 44 ಸಿನಿಮಾ ತೆರೆಗೆ ಬರ್ತಿವೆ.
ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹೊಸ ದಾಖಲೆಯೇ ಸರಿ. ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಬೇಕು ಎನ್ನುವ ಬೇಡಿಕೆ ಇಲ್ಲದೇ ಸಿಕ್ಕ ಸಿಕ್ಕ ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಮುಂದಿನ ವಾರ ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ', ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಸೇರಿ ಕೆಲ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಮತ್ತೆ ಚಿತ್ರಮಂದಿರ ಸಮಸ್ಯೆ ಶುರುವಾಗಬಹುದು ಎಂದು ಈ ವಾರ ಸಣ್ಣ ಸಣ್ಣ ಕನ್ನಡ ಸಿನಿಮಾಗಳು ಒಮ್ಮೆಲೆ ಬಿಡುಗಡೆ ಆಗ್ತಿವೆ.