ಶ್ರೀಮುರಳಿ ನಟನೆಯ 'ಚಂದ್ರಚಕೋರಿ' ಸಿನಿಮಾ ಆ ಕಾಲಕ್ಕೆ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಬಂದು ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಎಸ್. ನಾರಾಯಣ್ ನಿರ್ದೇಶನ, ಎಸ್‌. ಎ ರಾಜ್‌ಕುಮಾರ್ ಸಂಗೀತ ಜಾದೂ ಮಾಡಿತ್ತು. ಪ್ರಿಯಾ ಎಸ್ ಛಾಬ್ರಿಯಾ ಹಾಗೂ ನಾಜ್ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದರು. ಬಹಳ ವರ್ಷಗಳ ಬಳಿಕ ಸಿನಿಮಾ ಪ್ರಿಯಾ ಪ್ರತಿಕ್ರಿಯಿಸಿದ್ದಾರೆ.

'ಚಂದ್ರಚಕೋರಿ' ಸಿನಿಮಾ ಹಿಟ್ ಆಗಿ ಶ್ರೀಮುರಳಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡರು. ಆದರೆ ನಾಯಕಿಯರಾಗಿ ನಟಿಸಿದ್ದ ಪ್ರಿಯಾ ಹಾಗೂ ನಾಜ್ ಬಳಿಕ ಸೈಲೆಂಟ್ ಆಗಿಬಿಟ್ಟಿದ್ದರು. ಈ ಬಗ್ಗೆ ಪ್ರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಮಾಡಿ ಮಾತನಾಡಿದ್ದಾರೆ. ಇತ್ತೀಚೆಗೆ ಜಾಹೀರಾತುಗಳು ಹಾಗೂ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. 'ಚಂದ್ರಚಕೋರಿ' ಬಳಿಕ ಯಾಕೆ ಸಿನಿಮಾ ಮಾಡ್ಲಿಲ್ಲ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ.

"ಸಿನಿಮಾ ಬಿಡುಗಡೆ ಆದಾಗ ದೊಡ್ಡದಾಗಿ ಹಿಟ್ ಆಗಿತ್ತು ಅಂತ ನನಗೆ ಗೊತ್ತಿತ್ತು.. ಆದ್ರೆ ಕಳೆದ ಒಂದು ವರ್ಷದಿಂದ ಮಾತ್ರ ನನಗೆ ಆ ಗೆಲುವಿನ ಪ್ರೀತಿ ಸಿಕ್ತಿದೆ. ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾ.. ಸಾಕಷ್ಟು ಮೆಸೇಜ್ ಬಂತು. ಮೆಚ್ಚುಗೆ ವ್ಯಕ್ತವಾಯ್ತು.. ಹಾಗಾಗಿ ಮತ್ತೆ ಏನಾದರೂ ಮಾಡ್ಬೇಕು, ಈ ಪ್ರೀತಿಯನ್ನು ಮರಳಿ ವಾಪಸ್ ಕೊಡಬೇಕು. ಅದಕ್ಕಾಗಿ ಈ ರೀಲ್ಸ್ ಮಾಡ್ತಿದ್ದೀನಿ ಎಂದು ಪ್ರಿಯಾ ಹೇಳಿದ್ದಾರೆ.

'ಚಂದ್ರಚಕೋರಿ' ಸಿನಿಮಾ ಬಿಡುಗಡೆ ಬೆನ್ನಲ್ಲೇ ನಮ್ಮ ತಂದೆ ಹುಷಾರ್ ತಪ್ಪಿದ್ರು.. ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ರು. ಹಾಗಾಗಿ ನಾನು ಸೌದಿ ಅರೇಬಿಯಾಗೆ ವಾಪಸ್ ಹೋಗಿ ಕುಟುಂಬದ ಜೊತೆಗಿದ್ದೆ. ಆ ಬಳಿಕ ಸಾಕಷ್ಟು ಅವಕಾಶಗಳು ಬಂದ್ರು, ಯಾವುದನ್ನು ಒಪ್ಪಿಕೊಳ್ಳಲಿಲ್ಲ. ಎರಡು ವರ್ಷ ಅಲ್ಲೇ ಇದ್ದೆ. ತಂದೆ ಚೇತರಿಸಿಕೊಂಡ ನಂತ್ರ ನಾನು ಭಾರತಕ್ಕೆ ಬರಲ್ಲ ಎನ್ನುವ ವದಂತಿ ಹರಿದಾಡಿತ್ತು. ಆದ್ರೆ ನಾನು ಮರಳಿ ಬಂದೆ. ಅಷ್ಟರಲ್ಲಿ ಅವಕಾಶಗಳು ಬರುವುದು ನಿಂತು ಹೋಗಿತ್ತು.. ಬಳಿಕ ಡ್ಯಾನ್ಸ್, ಜಾಹೀರಾತುಗಳಲ್ಲಿ ಮಿಂಚಿದೆ. ಮದುವೆ ಕೂಡ ಆಯ್ತು.. ಹಾಗಾಗಿ ಸಿನಿಮಾಗಳಿಂದ ಬಹಳ ದೂರ ಇದ್ದೆ. ಈಗ ಮತ್ತೆ ಜಾಹೀರಾತುಗಳಲ್ಲಿ ನಟಿಸ್ತಿದ್ದೀನಿ" ಎಂದು ಪ್ರಿಯಾ ರೀಲ್ಸ್ ಮಾಡಿ ಮಾಹಿತಿ ನೀಡಿದ್ದಾರೆ.