ಎರಡು ಸಿನಿಮಾಗಳ ಬಳಿಕ ಯುವ ರಾಜ್‌ಕುಮಾರ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ದುನಿಯಾ ಸೂರಿ ಕಾಂಬಿನೇಷನ್‌ನಲ್ಲಿ 3ನೇ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಅದು ನಿಂತು ಹೋಗಿದೆ. 'ಯುವ' ಹಾಗೂ 'ಎಕ್ಕ' ಸಿನಿಮಾಗಳಲ್ಲಿ ರಾಘಣ್ಣನ ಕಿರಿಮಗನ ಪರ್ಫಾರ್ಮನ್ಸ್‌ಗೆ ಒಳ್ಳೆ ಅಂಕ ಸಿಕ್ಕಿತ್ತು. ಆದರೆ 2 ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಹಾಗಾಗಿ 3ನೇ ಚಿತ್ರದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದಾರೆ.
ತರುಣ್ ಸುಧೀರ್ ನಿರ್ಮಾಣದ ಚಿತ್ರದಲ್ಲಿ ಯುವ ರಾಜ್‌ಕುಮಾರ್ ನಟಿಸ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಗಣೇಶ ಹಬ್ಬದ ಸಂಭ್ರಮದಲ್ಲಿ 'ಯುವ'- 3 ಸಿನಿಮಾ ಘೋಷಣೆ ಆಗುವ ನಿರೀಕ್ಷೆಯಿದೆ. 'ಲ್ಯಾಂಡ್‌ಲಾರ್ಡ್' ಸಿನಿಮಾ ಖ್ಯಾತಿಯ ಜಡೇಶ್ ಹಂಪಿ ಈ ಸಿನಿಮಾ ನಿರ್ದೇಶನ ಮಾಡುವುದು ಪಕ್ಕಾ ಎನ್ನಲಾಗ್ತಿದೆ. ಸ್ವತಃ ತರುಣ್ ಆಕ್ಷನ್ ಕಟ್ ಹೇಳಿದ್ರು ಅಚ್ಚರಿಪಡಬೇಕಿಲ್ಲ. ಬಹಳ ಹಿಂದೆಯೇ ಇಂತಾದೊಂದು ಗುಸುಗುಸು ಕೇಳಿಬಂದಿತ್ತು. ಆದರೆ ನಿಜವಾಗಿರಲಿಲ್ಲ. ಈಗ ಅದೇ ನಿಜವಾಗಬಹುದು ಎನ್ನುವ ಚರ್ಚೆ ಜೋರಾಗಿದೆ.
'ಕಾಟೇರ' ಬಳಿಕ ದರ್ಶನ್ ಕಾಂಬಿನೇಷನ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಲು ತರುಣ್ ಸುಧೀರ್ ಮುಂದಾಗಿದ್ದರು. ಅದಕ್ಕಾಗಿ ಬಹಳ ದಿನಗಳಿಂದ ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಹಾಗಾಗಿ ಅವರ ಯಾವುದೇ ಸಿನಿಮಾ ಸದ್ಯಕ್ಕೆ ಶುರುವಾಗುವುದಿಲ್ಲ. ಕಾದು ಕಾದು ಸುಸ್ತಾಗಿ ಈಗ ಯುವ ಜೊತೆ ಸಿನಿಮಾ ಮಾಡಲು ಕುಂಬಿ ಮುಂದಾಗಿದ್ದಾರೆ ಎನ್ನುವ ಊಹಾಪೋಹ ಗರಿಗೆದರಿದೆ.
ತಮ್ಮದೇ ಬ್ಯಾನರ್ ಅಡಿಯಲ್ಲಿ 'ಗುರುಶಿಷ್ಯರು' ಹಾಗೂ 'ಏಳುಮಲೆ' ಚಿತ್ರಗಳನ್ನು ಅವರು ನಿರ್ಮಿಸಿದ್ದರು. ಈ ಬಾರಿ ದೊಡ್ಡ ಬಜೆಟ್‌ನಲ್ಲಿ ಯುವ ನಟನೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಸಿಗಲಿಲ್ಲ. 'ಯುವ ರಣಧೀರ ಕಂಠೀರವ' ಸಿನಿಮಾ ಮೂಲಕ ರಾಘಣ್ಣನ ಕಿರಿಮಗ ಚಿತ್ರರಂಗಕ್ಕೆ ಬರಬೇಕಿತ್ತು. ಆ ಸಿನಿಮಾ ನಿಂತು 'ಯುವ' ಚಿತ್ರದಲ್ಲಿ ನಟಿಸುವಂತಾಗಿತ್ತು. ಈಗ 3ನೇ ಸಿನಿಮಾ ಬಗ್ಗೆ ಟಾಕ್ ಜೋರಾಗಿದೆ.