ಧ್ರುವ ಸರ್ಜಾ ನಟನೆಯ ಸಿನಿಮಾಗಳಿಗೆ ಪದೇ ಪದೆ ಹಿನ್ನಡೆ ಆಗ್ತಿದೆ. ಅವರು ನಟಿಸೋ ಸಿನಿಮಾಗಳು ಅಷ್ಟು ಸುಲಭವಾಗಿ ತೆರೆಗೆ ಬರಲ್ಲ. ಸಾಕಷ್ಟು ಅಡೆತಡೆ ಎದುರಿಸಿ ಸಿನಿಮಾ ಬಿಡುಗಡೆ ಮಾಡುವಂತಾಗುತ್ತದೆ. 'ಕೆಡಿ' ಬಳಿಕ ಎರಡು ಸಿನಿಮಾಗಳ ಬಗ್ಗೆ ಸುದ್ದಿ ಬಂತು. ಅಷ್ಟೇ ಬೇಗ ನಿಂತು ಹೋಯ್ತು. ಈಗ ತೆಲುಗು ನಿರ್ದೇಶಕನ ಜೊತೆ ಸಿನಿಮಾ ಮಾಡಲು ಧ್ರುವ ಸಜ್ಜಾಗುತ್ತಿದ್ದಾರೆ.
ಶಿವರಾಜ್‌ಕುಮಾರ್ ನಟನೆಯ 'ಡ್ಯಾಡ್' ಚಿತ್ರಕ್ಕೆ ಅನಿಲ್ ಕನ್ನೆಗಂಟಿ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ ಅವರು ಕಥೆ ಹೇಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇಬ್ಬರ ಕಾಂಬಿನೇಷನ್ ಸಿನಿಮಾ ನಿರೀಕ್ಷೆ ಮಾಡಬಹುದು. ತೆಲುಗಿನಲ್ಲಿ 'ರನ್', 'ಹಿಡಿಂಬ', 'ಮಿ. ನೂಕಯ್ಯ' ಹಾಗೂ 'ಅಸಾಧ್ಯುಡು' ಎಂಬ ಸಿನಿಮಾಗಳನ್ನು ಅನಿಲ್ ನಿರ್ದೇಶನ ಮಾಡಿದ್ದಾರೆ. 'ಡ್ಯಾಡ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಜ್‌ಗುರು ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದ 'ಕ್ರಿಮಿನಲ್' ಸಿನಿಮಾ ಕಾರಣಾಂತರಗಳಿಂದ ನಿಂತು ಹೋಗಿದೆ. ದುನಿಯಾ ಸೂರಿ ಜೊತೆಗೆ ಧ್ರುವ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. 'ಕಾಗೆಬಂಗಾರ' ಸಿನಿಮಾ ಕಡೆ ಸೂರಿ ಗಮನ ಹರಿಸಿದ್ದಾರೆ. '777 ಚಾರ್ಲಿ' ಸಿನಿಮಾ ಖ್ಯಾತಿಯ ಕಿರಣ್ ರಾಜ್ ನಿರ್ದೇಶನದ ಚಿತ್ರದಲ್ಲಿ ಧ್ರುವ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಇದೆಲ್ಲದರ ನಡುವೆ ಧ್ರುವಗೆ ಅನಿಲ್ ಕನ್ನೆಗಂಟಿ ಕಥೆ ಹೇಳಿದ್ದಾರೆ. ಇಬ್ಬರೂ ಭೇಟಿಯಾಗಿ ಚರ್ಚೆ ನಡೆಸಿರುವ ಬಗ್ಗೆ ಅನಿಲ್ ಮಾಹಿತಿ ಹಂಚಿಕೊಂಡಿದ್ದಾರೆ.
"ಒಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಲ್ಲ ಚರ್ಚೆ. ಕೆಲವೊಮ್ಮೆ, ಮೊದಲ ಹೆಜ್ಜೆ ಎಂದರೆ ಕೇವಲ ಒಂದು ಕಥೆಯನ್ನು ಹೇಳುವುದಷ್ಟೇ" ಎಂದು ಬರೆದು ಅನಿಲ್ ಕನ್ನೆಗಂಟಿ ಧ್ರುವ ಸರ್ಜಾ ಜೊತೆಗಿನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಧ್ರುವ ನಟಿಸಿದ 'ಅದ್ಧೂರಿ', 'ಬಹದ್ದೂರ್' ಹಾಗೂ 'ಭರ್ಜರಿ' ಸಿನಿಮಾಗಳು ಯಶಸ್ಸು ಕಂಡಿತ್ತು. ಆದರೆ ಬಳಿಕ ಬಂದ ಯಾವುದೇ ಸಿನಿಮಾ ಗೆಲ್ಲಲಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಅವರ ಕನಸು ಕೈಗೂಡುತ್ತಿಲ್ಲ. ಇದೆಲ್ಲದರ ನಡುವೆ ಅನಿಲ್ ಕನ್ನೆಗಂಟಿ ಸಿನಿಮಾ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.