ಎರಡು ವರ್ಷಗಳ ಹಿಂದೆ 'ಕೃಷ್ಣಂಪ್ರಣಯ ಸಖಿ' ಸಿನಿಮಾ ಕಟ್ಟಿಕೊಟ್ಟಿದ್ದ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಜೋಡಿಯ ಹೊಸ ಸಿನಿಮಾ 'ಬೃಂದಾವಿಹಾರಿ' ತೆರೆಗೆ ಬಂದಿದೆ. ತಿಂಗಳ ಹಿಂದೆ ಬರಬೇಕಿದ್ದ ಸಿನಿಮಾ 'ಪ್ರೇಮದ ಊರಲಿ' ಅಬ್ಬರದ ಕಾರಣಕ್ಕೆ ತಡವಾಗಿತ್ತು. ಇದೀಗ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ತೆರೆಕಂಡು ಪ್ರದರ್ಶನ ಕಾಣ್ತಿದೆ.

ಗಣೇಶ್ ಅಭಿಮಾನಿಗಳ 'ಬೃಂದಾವಿಹಾರಿ' ಚಿತ್ರಕ್ಕಾಗಿ ಕಾಯ್ತಿದ್ದರು. ಟ್ರೈಲರ್ ಇಲ್ಲದೇ ಸಿನಿಮಾ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಶ್ರೀನಿವಾಸ್ ರಾಜು ಕುತೂಹಲ ಮೂಡಿಸಿದ್ದರು. ಎಲ್ಲಾ ಕುತೂಹಲಕ್ಕೆ ಈಗ ತೆರೆಗೆ ಬಿದ್ದಿದೆ. ಗಣೇಶ್ ಜೊತೆಗೆ ಚಿತ್ರದಲ್ಲಿ ದೇವಕಾ ಭಟ್ ಹಾಗೂ ಮಾಳವಿಕಾ ಶರ್ಮಾ ನಾಯಕಿಯರಾಗಿ ಮಿಂಚಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು, ಲಕ್ಷ್ಮಿ, ಸಾಧುಕೋಕಿಲ, ರಾಮ್‌ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಗಣಿ ಹೊಸಬರಿಗೆ ಅವಕಾಶ ಕೊಡಿ

ಶ್ರೀನಿವಾಸ್ ರಾಜು ಮಸಾಲ ಆಂಧ್ರದ್ದು, ಡೈರೆಕ್ಟರ್ ಅಟ್ಲೀಸ್ಟ್ ಕೊಳಲು ಊದಿದ್ದಾರೆ. ಅದಕ್ಕೆ ಟ್ರೈಲರ್ ರಿಲೀಸ್ ಮಾಡ್ಲಿಲ್ಲ ಅನ್ಸತ್ತೆ.. ಗಣೇಶ್ ಹೊಸಬರ ಆಲೋಚನೆಗಳಿಗೆ ಹೊಸ ನಿರ್ದೇಶಕರಿಗೆ ಕೊಂಚ ಬೆಂಬಲ ನೀಡಿ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಐಡಿಯಾ ಚೆನ್ನಾಗಿದೆ

ಸಿನಿಮಾ ಹಿಂದಿರುವ ಐಡಿಯಾ ಚೆನ್ನಾಗಿದೆ. ಆದರೆ ಹಲವು ಕಡೆ ಲಾಜಿಕ್ ಮಿಸ್ ಆಗಿದೆ. ಕೆಲವರಿಗೆ ಸಿನಿಮಾ ಇಷ್ಟವಾಗಬಹುದು. ಕೆಲವರಿಗೆ ಕನೆಕ್ಟ್ ಆಗದೇ ಇರಬಹುದು. ಅನಗತ್ಯವಾದ ಅಪಹಾಸ್ಯಗಳು ಇಲ್ಲಿ ಅಪ್ರಸ್ತುತ.. ಕೆಲವು ದೃಶ್ಯಗಳನ್ನು ಸುಲಭವಾಗಿ ಕೈಬಿಡಬಹುದಿತ್ತು. ಕಥೆ ಸರಳವಾಗಿದ್ದರೂ, ಅದನ್ನು ಪರಿಣಾಮಕಾರಿಯಾಗಿ ಮತ್ತು ಪ್ರಭಾವಶಾಲಿಯಾಗಿ ಪ್ರಸ್ತುತಪಡಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ನಿರಾಸೆ ಆಯ್ತು

ತುಂಬಾ ನಿರಾಸೆ ಆಯ್ತು. ಹಾಡುಗಳನ್ನು ಬಿಟ್ಟರೆ ಬೇರೇನೂ ಚೆನ್ನಾಗಿರಲಿಲ್ಲ. ನಿರ್ದೇಶನ ವಿಫಲವಾಗಿದೆ, ಸಿನಿಮಾ ತುಂಬಾ ಎಳೆದಾಡಿದಂತಿದೆ . ಗಣೇಶ್ ಸರ್ ವಿಫಲರಾಗಿದ್ದಾರೆ, ನಿಜವಾಗಿಯೂ ಬೇಸರ ಆಯ್ತು. ಟಿಕೆಟ್‌ಗಾಗಿ ಹಣ ಖರ್ಚು ಮಾಡಿದ್ದರಿಂದ, ಕಷ್ಟಪಟ್ಟು ಕೊನೆಯವರೆಗೂ ನೋಡಿದೆ ಅಷ್ಟೇ ಅನ್ನೋದು ಮಗದೊಬ್ಬರ ಅಭಿಪ್ರಾಯ.

ಸೆಕೆಂಡ್ ಹಾಫ್ ಬೆಟರ್

ನಿಧಾನಗತಿಯ ನಿರೂಪಣೆಯೊಂದಿಗೆ ಆರಂಭವಾಗುವ ಸಿನಿಮಾ, ಎಲ್ಲಿಯೂ ವೇಗ ಪಡೆದುಕೊಳ್ಳುವುದಿಲ್ಲ. ಅಲ್ಲದೆ, ಚಿತ್ರದಲ್ಲಿರುವ ಹಾಡುಗಳು ಕಥೆಯ ನಿಧಾನಗತಿಗೆ ಮತ್ತಷ್ಟು ಅಡ್ಡಿಯಾಗುತ್ತವೆ. ಪ್ರೊಡಕ್ಷನ್ ವ್ಯಾಲ್ಯೂಸ್ ಅತ್ಯುತ್ತಮವಾಗಿವೆ, ಆದರೆ ಇದರಿಂದ ಸಿನಿಮಾಗೆ ಯಾವುದೇ ಪ್ರಯೋಜನವಿಲ್ಲ. ಇದು ಕೇವಲ ಮೆರುಗು ನೀಡುವುದಷ್ಟೇ. ಇಂಟರ್ವಲ್‌ನಲ್ಲಿ ಒಂದು ಸಣ್ಣ ತಿರುವು ಇದೆ, ಅಷ್ಟೇ. ಸೆಕೆಂಡ್ ಹಾಫ್ ಕುತೂಹಲ ಹುಟ್ಟುಹಾಕುತ್ತದೆಯಾದರೂ, ಸಂಪೂರ್ಣವಾಗಿ ವಿಫಲವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಇದು ಸರಾಸರಿಗಿಂತ ಕೆಳಗಿನ ಮಟ್ಟದಲ್ಲಿದೆ ಎಂದು ಶ್ರೀಧರ್ ಎಂಬುವವರು ಟ್ವೀಟ್ ಮಾಡಿದ್ದಾರೆ.