ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಸಿನಿಮಾ ನವೆಂಬರ್ 20ರಂದು ತೆರೆಗೆ ಬರ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೆದಿತ್ತು. ಬಳಿಕ ಒಂದು ತಿಂಗಳು ಬಿಡುಗಡೆ ಮುಂದೂಡಿದ್ದರು.
'ಪ್ರೇಮದ ಊರಲಿ' ಸಿನಿಮಾ ಆರ್ಭಟದ ಹಿನ್ನೆಲೆಯಲ್ಲಿ 'ಬೃಂದಾವಿಹಾರಿ' ಬಿಡುಗಡೆ ತಡ ಮಾಡಿದ್ದರು. 50 ದಿನ ಕಳೆದರೂ 'ಪ್ರೇಮದ ಊರಲಿ' ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಮತ್ತೊಂದು ಕಡೆ 'ರಾಮಾಯಣ' ಸಿನಿಮಾ ದರ್ಬಾರ್ ಜೋರಾಗಿದೆ. ಇದೆಲ್ಲದರ ನಡುವೆ ಒಂದಷ್ಟು ಪರಭಾಷಾ ಸಿನಿಮಾಗಳು ಶುಕ್ರವಾರ ತೆರೆಗಪ್ಪಳಿಸ್ತಿವೆ. ಅದರ ನಡುವೆ ಗಣೇಶ್ 'ಬೃಂದಾವಿಹಾರಿ'ಯಾಗಿ ಬರ್ತಿದ್ದಾರೆ.
ಮುಳಬಾಗಿಲಿನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಸಹ ನಡೆದಿದ್ದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಶಿವರಾಜ್ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 'ಬೃಂದಾವಿಹಾರಿ' ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಕೋರಿದರು. 'ಪ್ರೇಮದ ಊರಲಿ' ಚಿತ್ರತಂಡ ಕೂಡ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟಿತ್ತು. ಎರಡು ವರ್ಷಗಳ ಹಿಂದೆ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಮೂಲಕ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಹಿಟ್ ಕೊಟ್ಟಿದ್ದರು. ಅದೇ ಕಾಂಬಿನೇಷನ್ನಲ್ಲಿ 'ಬೃಂದಾವಿಹಾರಿ' ಸಿನಿಮಾ ಬರ್ತಿದೆ.
ಟ್ರೈಲರ್ ಇಲ್ಲದೇ ಕೇವಲ ಹಾಡುಗಳನ್ನು ಮಾತ್ರ ಬಿಡುಗಡೆ ಮಾಡಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗ್ತಿದೆ. ಗಣೇಶ್ ವೃತ್ತಿಜೀವನದಲ್ಲಿ ಬಹಳ ಅದ್ಧೂರಿ ಸಿನಿಮಾ ಇದಾಗಿದೆ. ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು, ಕುರಿ ಪ್ರತಾಪ್, ಗಿರಿ ಶಿವಣ್ಣ, ಪಾವಗಡ ಮಂಜು ತಾರಾಗಣದಲ್ಲಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ಹಾಗೂ ವೆಂಕಟ್ ಪ್ರಸಾದ್ ಛಾಯಾಗ್ರಹಣ 'ಬೃಂದಾವಿಹಾರಿ' ಚಿತ್ರಕ್ಕಿದೆ. ಗಣೇಶ್ ಸಿನಿಮಾಗಳಿಗೆ ಮೊದಲಿನಂತೆ ಕ್ರೇಜ್ ಇಲ್ಲ. ಸಿನಿಮಾ ತೆರೆಗೆ ಬಂದಮೇಲೆ ನಿಧಾನನವಾಗಿ ಸದ್ದು ಮಾಡುತ್ತಾ ಕಾದು ನೋಡಬೇಕಿದೆ.