ಮತ್ತೊಂದು ಶುಕ್ರವಾರ ಬಂದಿದೆ. ಸಿನಿರಸಿಕರಿಗೆ ಚಿತ್ರಮಂದಿರಗಳಲ್ಲಿ ಮನರಂಜನೆಯ ರಸದೌತಣ ಸಿದ್ಧವಾಗಿದೆ. 'ಪ್ರೇಮದ ಊರಲಿ' ಹಾಗೂ 'ರಾಮಾಯಣ' ಆರ್ಭಟ ಕಮ್ಮಿಯಾದ ಬಳಿಕ ನಿಧಾನವಾಗಿ ಒಂದೊಂದೇ ಸಿನಿಮಾ ಬಿಡುಗಡೆ ಆಗ್ತಿವೆ.

ಇತ್ತ ಓಟಿಟಿಯಲ್ಲಿ ಮೂರು ಹೊಚ್ಚಹೊಸ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. 'ಪ್ರೇಮದ ಊರಲಿ' ಚಿತ್ರದ ಜೊತೆಗೆ 'ಮಾರ್ನಮಿ' ಹಾಗೂ 'ಹೆಗ್ಗಣ ಮುದ್ದು' ಸಿನಿಮಾಗಳು ಪ್ರೈಂ ವೀಡಿಯೋದಲ್ಲಿ ವೀಕ್ಷಣೆ ಲಭ್ಯವಿದೆ. ಅತ್ತ ಚಿತ್ರಮಂದಿರಗಳಲ್ಲಿ ಈ ವಾರ ಒಂದಲ್ಲ ಎರಡಲ್ಲ ನಾಲ್ಕು ಸಿನಿಮಾಗಳು ತೆರೆಗಪ್ಪಳಿಸಿವೆ. ಎರಡು ಸಿನಿಮಾಗಳ ಭರವಸೆ ಮೂಡಿಸಿವೆ.

ಬೃಂದಾವಿಹಾರಿ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಚಿತ್ರಕ್ಕೆ ಈ ವಾರ ಬಿಡುಗಡೆ ಭಾಗ್ಯ ಸಿಕ್ಕಿದೆ. ದಸರಾ ಸಂಭ್ರಮದಲ್ಲಿ ಬರಬೇಕಿದ್ದ ಸಿನಿಮಾ ದೀಪಾವಳಿಯನ್ನು ಮುಗಿದ ಬಳಿಕ ತೆರೆಗೆ ಬಂದಿದೆ. ಶ್ರೀನಿವಾಸ್ ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಕಾಂಬಿನೇಷನ್‌ನಲ್ಲಿ ಎರಡು ವರ್ಷಗಳ ಹಿಂದೆ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಬಂದು ಗೆದ್ದಿತ್ತು. ಹಾಗಾಗಿ 'ಬೃಂದಾವಿಹಾರಿ' ನಿರೀಕ್ಷೆ ಹುಟ್ಟಾಕ್ಕಿದೆ. ಟ್ರೈಲರ್ ಬಿಡದೇ ಸಾಂಗ್ಸ್ ಮಾತ್ರ ಬಿಟ್ಟು ಕುತೂಹಲ ಮೂಡಿಸಲಾಗಿದೆ. ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ.

ಶಂಕರಾಭರಣ

ಶೈನ್ ಶೆಟ್ಟಿ ನಿರ್ಮಿಸಿ ನಟಿಸಿರುವ 'ಶಂಕರಾಭರಣ' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ. ಚೀನಾ ಚಿತ್ರೋತ್ಸವದಲ್ಲಿ ಕೂಡ ಪ್ರದರ್ಶನ ಕಂಡಿದ್ದ ಚಿತ್ರದ ಪ್ರೀಮಿಯರ್ ಶೋಗಳು ಹಿಟ್ ಆಗಿದೆ. ಕರಾವಳಿ ಭಾಗದ ಖಾಸಗಿ ಬಸ್‌ಗಳ ಸುತ್ತಾ ಸಿನಿಮಾ ಕಥೆ ಹೇಳಲಾಗಿದೆ. 'ಶಂಕರಾಭರಣ' ಹೆಸರಿನ ಖಾಸಗಿ ಬಸ್ ಡ್ರೈವರ್ ಕಥೆಯನ್ನು ಸ್ವತಃ ಶೈನ್ ಶೆಟ್ಟಿ ಬರೆದಿದ್ದಾರೆ. ತಮ್ಮ ಜೀವನದ ಅನುಭವಗಳಿಗೆ ಸಿನಿಮಾ ರೂಪ ಕೊಟ್ಟಿದ್ದಾರೆ. ಈ ಹಾರರ್ ಕಾಮಿಡಿ ಚಿತ್ರವನ್ನು ಸುಮಂತ್ ಭಟ್ ನಿರ್ದೇಶನ ಮಾಡಿದ್ದಾರೆ.

ಮಾರಿಗೆ ದಾರಿ

ಈ ವಾರ ಕನ್ನಡ ಪ್ರೇಕ್ಷಕರ ಮುಂದೆ ಬಂದಿರುವ ಮತ್ತೊಂದು ಸಿನಿಮಾ 'ಮಾರಿಗೆ ದಾರಿ'. ಅಗಸ್ತ್ಯ ಮತ್ತು ಮಹಾಲಕ್ಷ್ಮೀ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಸ್ವತಃ ಅಗಸ್ತ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ತಾರಾಗಣದಲ್ಲಿದ್ದಾರೆ. ರಾಧಾ ಫಿಲಂಸ್ ಬ್ಯಾನರಿನಡಿಯಲ್ಲಿ ಸಿನಿಮಾ ತಯಾರಾಗಿ ಇದೀಗ ಬಿಡುಗಡೆಯಾಗಿದೆ.

ವಿದೂಷಕ

ಯಶ್ ಬಿಜೂರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಯಶವಂತ್ ಬಿಜೂರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಸಿನಿಮಾ 'ವಿದೂಷಕ'.. ನೈಜಘಟನೆಯಿಂದ ಪ್ರೇರಣೆಗೊಂಡು ಮಾಡಿರುವ ಕಾಮಿಡಿ ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದ್ದು ರವಿ ಸಾಲಿಯಾನ್ ಹಾಗೂ ನಾಯಕಿ ಅಮೃತಾ ಉಪಾರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ನಾಯಕನಿಗೆ ಇರುವ 'ಗೈನೊಫೋಬಿಯಾ' ಎಂಬ ಸಮಸ್ಯೆ ಸುತ್ತಾ ಕಥೆಯನ್ನು ಹೆಣೆಯಲಾಗಿದೆ.