'ಪ್ರೇಮದ ಊರಲಿ' ಸಿನಿಮಾ 100 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 50 ದಿನ ಪೂರೈಸಿದೆ. ಇವತ್ತಿಗೂ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಲೇ ಇದೆ. ಈಗಾಗಲೇ 150 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಈ ವರ್ಷ ಕನ್ನಡದಲ್ಲಿ ಅತಿದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿದೆ.

ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಪ್ರೇಮದ ಊರಲಿ' ಜಾಗ ಮಾಡಿಕೊಂಡಿದೆ. ಕನ್ನಡದಲ್ಲಿ 'ಮುಂಗಾರುಮಳೆ' ಬಳಿಕ ಹೊಸಬರ ಚಿತ್ರವೊಂದಕ್ಕೆ ಸಿಕ್ಕ ಅತಿದೊಡ್ಡ ಗೆಲುವು ಇದಾಗಿದೆ. 'ಜೈಲರ್- 2', 'ರಣಬಾಲಿ' ಚಿತ್ರಗಳ ಆರ್ಭಟಕ್ಕೂ ಜಗ್ಗದ ಸಿನಿಮಾ ಈಗ 'ರಾಮಾಯಣ' ಚಿತ್ರದ ಎದುರು ಕೂಡ ಸಖತ್ ಸದ್ದು ಮಾಡ್ತಿದೆ.

50 ದಿನ ದಾಖಲೆ

'ಪ್ರೇಮದ ಊರಲಿ' ಸಿನಿಮಾ ನಿನ್ನೆ ಮೊನ್ನೆ ಕೂಡ ದಿನಕ್ಕೆ 40 ಲಕ್ಷ ಕಲೆಕ್ಷನ್ ಮಾಡಿದೆ. ಇದೀಗ ಯಶಸ್ವಿಯಾಗಿ 50 ದಿನ ಪೂರೈಸಿ ಸಂಚಲನ ಸೃಷ್ಟಿಸಿದೆ. ಇದೇ ಸಂಭ್ರಮದಲ್ಲಿ ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಅಂದಹಾಗೆ ಮೊದಲ ದಿನ ಯಾವುದೇ ನಿರೀಕ್ಷೆ ಇಲ್ಲದೇ ರಾಜ್ಯಾದ್ಯಂತ 62 ಶೋಗಳಲ್ಲಿ ಸಿನಿಮಾ ಪ್ರದರ್ಶನ ಆರಂಭಿಸಿತ್ತು. ಬಳಿಕ ನಿಧಾನವಾಗಿ ಶೋಗಳ ಸಂಖ್ಯೆ ಹೆಚ್ಚಿಕೊಂಡು ಬಂದಿತ್ತು. ಇದೀಗ 50ನೇ ದಿನ 140 ಕ್ಕೂ ಹೆಚ್ಚು ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗ್ತಿದೆ.

ಒಟ್ಟು ಕಲೆಕ್ಷನ್

ಕನ್ನಡ ಚಿತ್ರರಂಗದ ಹಲವು ಬಾಕ್ಸಾಫೀಸ್ ದಾಖಲೆಗಳನ್ನು 'ಪ್ರೇಮದ ಊರಲಿ' ಸಿನಿಮಾ ಮುರಿದು ಮುನ್ನುಗ್ಗುತ್ತಿದೆ. ಚಿತ್ರದ ಒಟ್ಟು ಕಲೆಕ್ಷನ್ 156 ಕೋಟಿ ರೂ. ದಾಡಿದೆ. ನೆಟ್ ಕಲೆಕ್ಷನ್ 120 ಕೋಟಿ ರೂ.ಗೂ ಹೆಚ್ಚಿದೆ. ಕಳೆದ ವರ್ಷ ತೆರೆಕಂಡಿದ್ದ 'ಸು ಫ್ರಂ ಸೋ'ಗಿಂತಲೂ ದೊಡ್ಡಮಟ್ಟದಲ್ಲಿ ಈ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಗೆದ್ದಿದೆ.

ಓಟಿಟಿ ರಿಲೀಸ್

ಸದ್ಯ 50 ದಿನ ಪೂರೈಸಿರುವ ಸಿನಿಮಾ ಓಟಿಟಿಗೆ ಬರುವುದು ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ಅಮೇಜಾನ್ ಪ್ರೈಂ ಜೊತೆ ಚಿತ್ರತಂಡ ಚರ್ಚೆ ನಡೆಸ್ತಿದೆ. ಬಹುತೇಕ ವ್ಯವಹಾರ ಕುದುರುವ ನಿರೀಕ್ಷೆಯಿದೆ. ಹಾಗಾಗಿ ಶೀಘ್ರದಲ್ಲೇ ಸಿನಿಮಾ ಓಟಿಟಿಗೆ ಬರುವ ಸಾಧ್ಯತೆ ದಟ್ಟವಾಗಿದೆ.