ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮಾತನಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಕುಟುಂಬದ ಜೊತೆ ನಾನು ಸದಾ ಸಂಪರ್ಕದಲ್ಲಿ ಇದ್ದೀನಿ. ಕಾನೂನು ಹೋರಾಟದ ಬಗ್ಗೆ ಕೂಡ ಚರ್ಚಿಸ್ತಿದ್ದೀನಿ. ಆದಷ್ಟು ಬೇಗ ದರ್ಶನ್ ಹೊರಗಡೆ ಬರ್ತಾರೆ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.

ಡಿಬಾಸ್ ಡಿಬಾಸ್ ಎಂದು ಕೂಗಿದವರ ಬಗ್ಗೆ ಮಂಡ್ಯ ಶಾಸಕ ರವಿ ಗಾಣಿಗ ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಕೂಡ ಸತೀಶ್ ರೆಡ್ಡಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. "ದರ್ಶನ್ ಆತ್ಮೀಯ ಸ್ನೇಹಿತರು ನನಗೆ. ಅವರ ಪತ್ನಿ ವಿಜಯಲಕ್ಷ್ಮಿ ನನ್ನ ಸಹೋದರಿ. ವಿಜಯಲಕ್ಷ್ಮಿ ನನ್ನ ಸಂಪರ್ಕದಲ್ಲಿದ್ದಾರೆ. ಪ್ರತಿ ವಾರ ನನ್ನ ಜೊತೆ ಮಾತನಾಡ್ತಾರೆ. ಶುಕ್ರವಾರ ಮತ್ತೆ ಮಾತನಾಡಿಸೋಕೆ ಹೋಗ್ತಿದ್ದೀನಿ. ಕಾನೂನಿನ ನಂಬಿಕೆಯಿದೆ. ದರ್ಶನ್ ಅವ್ರು ನೂರಕ್ಕೆ ನೂರರಷ್ಟು ಹೊರಗಡೆ ಬರ್ತಾರೆ. ಅನುಮಾನ ಬೇಡ" ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಒಬ್ಬ ಸೆಲೆಬ್ರೆಟಿಯನ್ನು ಹೀಗೆ ಮಾಡಿ ಮಾಡಿ ಅವ್ರಿಗೆ ತೊಂದರೆ ಆಗಿದೆ. ದರ್ಶನ್ ಅವ್ರಿಗೆ ದೇವರ ಆಶೀರ್ವಾದ ಇದೆ. ಅದಕ್ಕೆ ನಾನು ಹೊರಗಡೆ ಹೆಚ್ಚು ಮಾತಾಡಲ್ಲ. ಆದ್ರೆ ಅವ್ರ ಕುಟುಂಬದ ಜೊತೆ ನಿಂತಿದ್ದೇವೆ. ಯಾರೋ ಲಾಭಕ್ಕೆ ಬಂದು ಮಾತನಾಡಿ ಹೋಗುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಕೂಡ ದರ್ಶನ್ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದೆ. ಅಣ್ಣ ನೀವು ಜೈಲಿಗೆ ಬರಬೇಡಿ, ನಿಮ್ಮನ್ನು ಇಲ್ಲಿ ಫೇಸ್‌ ಮಾಡೋಕೆ ಆಗಲ್ಲ ಅಂದ್ರು. ಹಾಗಾಗಿ ನೋವಿನಲ್ಲಿರುವ ಕುಟುಂಬದ ಜೊತೆ ನಾವಿದ್ದೇವೆ. ಆದಷ್ಟು ಬೇಗ ದರ್ಶನ್ ಸಂಕಷ್ಟದಿಂದ ಪಾರಾಗಿ ಬರ್ತಾರೆ. ನಾನು ಕೂಡ ವಕೀಲರ ಜೊತೆ ಮಾತಣಾಡುವ ಪ್ರಯತ್ನ ಮಾಡ್ತಿದ್ದೇವೆ. ಕಂಡಿತ ದರ್ಶನ್ ಅವ್ರನ್ನು ಇಲ್ಲಿಗೆ ನಾನು ಕರ್ಕೊಂಡು ಬಂದೇ ಬರ್ತೀನಿ ಎಂದು ಸತೀಶ್ ರೆಡ್ಡಿ ವಿವರಿಸಿದ್ದಾರೆ.

ಬೊಮ್ಮನಹಳ್ಳಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಎರಡು ಬಾರಿ ದರ್ಶನ್ ಪ್ರಚಾರಕ್ಕೆ ಬಂದಿದ್ದರು. ಸತೀಶ್ ರೆಡ್ಡಿ ಪರ ಮತ ಯಾಚಿಸಿದ್ದರು. ದರ್ಶನ್ ಬಂದಾಗ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಬೇಗೂರು ರಸ್ತೆಯಲ್ಲಿ ರೋಡ್‌ ಶೋ ವೇಳೆ ಸಾವಿರಾರು ಜನ ಜಮಾಯಿಸಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ಸತೀಶ್ ರೆಡ್ಡಿ ವಿರುದ್ಧ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಿಂದ ಎದುರಾಳಿಯಾಗಿ ನಿಂತಿದ್ದರು. 24,215 ಮತಗಳಿಂದ ಸತೀಶ್ ರೆಡ್ಡಿ ಗೆದ್ದಿದ್ದರು. ಅವರ ಗೆಲುವಿಗೆ ದರ್ಶನ್ ಬೆಂಬಲ ಕೂಡ ಪ್ಲಸ್ ಆಗಿತ್ತು.