ಬಾಲಿವುಡ್ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ ಫಿಲ್ಮ್ ಮೇಕರ್ ಸಂಜಯ್ ಗುಪ್ತಾ ವಿಧವಶರಾಗಿದ್ದಾರೆ. ನಿನ್ನೆ(ಅಕ್ಟೋಬರ್ 30) ಸಂಜಯ್ ಗುಪ್ತಾ ತಮ್ಮ ಮನೆಯ ಬಾತ್ರೂಮ್ನಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದು ಇಂದು ಬೆಳಗ್ಗೆ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಕುಟುಂಬ ಸದಸ್ಯರು ಕೂಡ ಮನೆಯಲ್ಲೇ ಇದ್ದರು. ಆದರೆ ತಡರಾತ್ರಿ ಸಂಜಯ್ ಗುಪ್ತಾ ಬಾತ್ರೂಮ್ನಲ್ಲಿ ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ ಶವವಾಗಿ ಅವರು ಮನೆಮಂದಿಗೆ ಸಿಕ್ಕಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಅವರಿಗೆ 59 ವರ್ಷ ವಯಸ್ಸಾಗಿತ್ತು. ಕುಟುಂಬಸ್ಥರು ಕೂಡ ಸಂಜಯ್ ಗುಪ್ತಾ ಸಾವಿನ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸ್ತಿಲ್ಲ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
1994ರಲ್ಲಿ 'ಆತಿಶ್' ಚಿತ್ರವನ್ನು ಸಂಜಯ್ ಗುಪ್ತಾ ನಿರ್ದೇಶನ ಮಾಡಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ನಿರ್ಮಾಪಕರಾಗಿ ಕೆಲ ಸಿನಿಮಾಗಳನ್ನು ತಾವೇ ತೆರೆಗೆ ತಂದಿದ್ದರು. 'ರಾಮ್ ಶಾಸ್ತ್ರ', 'ಹಮೇಶಾ', 'ಕಾಂಟೆ', 'ಮುಸಾಫೀರ್', 'ಜಿಂದಾ', 'ಶೂಟೌಟ್ ಅಟ್ ವಡ್ಡಾಲ', 'ಕಾಬಿಲ್', 'ಮುಂಬೈ ಸಾಗಾ' ಸೇರಿ ಹಲವು ಹಿಟ್ ಸಿನಿಮಾಗಳು ಅವರ ಖಾತೆಯಲ್ಲಿವೆ.
'ಕಾಂಟೆ' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸಂಜಯ್ ದತ್, ಸುನೀಲ್ ಶೆಟ್ಟಿ ರೀತಿಯ ಘಟಾನುಘಟಿಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಹಾಲಿವುಡ್ ಆಕ್ಷನ್ ಸಿನಿಮಾಗಳಿಂದ ಪ್ರೇರಣೆಗೊಂಡು ಸಂಜಯ್ ಗುಪ್ತಾ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಬಹುತೇಕ ಸಿನಿಮಾಗಳು ರೀಮೆಕ್ ಆಗಿತ್ತು.