ಸುದೀಪ್ ನಟನೆಯ 'ಬಿಲ್ಲ ರಂಗ ಬಾಷ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಪ್ರೈಶೋಂ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ತೆಲುಗಿನಲ್ಲಿ ಕೆಲ ಸಿನಿಮಾಗಳನ್ನು ನಿರ್ಮಿಸಿ, ವಿತರಣೆ ಮಾಡಿ ಸಂಸ್ಥೆ ಹೆಸರು ಮಾಡಿದೆ. ಆದರೆ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ನಮಗೆ ಮೋಸ ಮಾಡಿದ್ರು ಎಂದು ಚೈತನ್ಯಾ ರೆಡ್ಡಿ ಆರೋಪಿಸಿದ್ದಾರೆ.

'ಬಿಲ್ಲ ರಂಗ ಬಾಷ' ಜೊತೆಗೆ 'ಸಂಬರಲ ಯೇತಿ ಗಟ್ಟು' ಎಂಬ ಮತ್ತೊಂದು ಚಿತ್ರವನ್ನು ಸಂಸ್ಥೆ ನಿರ್ಮಾಣ ಮಾಡ್ತಿದೆ. ಇತ್ತೀಚೆಗೆ ತೆಲುಗು ಯೂಟ್ಯೂಬ್ ಚಾನಲ್‌ಗಳಿಗೆ ಸಂದರ್ಶನ ನೀಡಿ ಎರಡೂ ಸಿನಿಮಾಗಳ ಬಗ್ಗೆ ಚೈತನ್ಯಾ ರೆಡ್ಡಿ ಮಾತನಾಡಿದ್ದಾರೆ. 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ವಿತರಣೆ ಮಾಡಿ 35 ಕೋಟಿ ರೂ. ನಷ್ಟ ಅನುಭವಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ ಬಿಡುಗಡೆ ಹೊತ್ತಲ್ಲಿ ಪೂರಿ ಹಾಗೂ ಚಾರ್ಮಿ ಬೆಂಬಲಕ್ಕೆ ನಾವು ನಿಂತೆವು. ನಷ್ಟ ಅನುಭವಿಸಿದೆವು. ಆದ್ರೆ ಅವ್ರು ಬಳಿಕ ನಮಗೆ ಮೋಸ ಮಾಡಿದ್ರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಮೆರಿಕಾದಲ್ಲಿದ್ದ ಚೈತನ್ಯಾ ರೆಡ್ಡಿ ಸಿನಿಮಾ ಮೇಲಿನ ಪ್ಯಾಷನ್‌ಗಾಗಿ ಇಲ್ಲಿದೆ ವಾಪಸ್ ಬಂದಿದ್ದಾರೆ. ಚಿತ್ರ ನಿರ್ಮಾಣ, ವಿತರಣೆಗೆ ಹಣ ತೊಡಗಿಸುತ್ತಿದ್ದಾರೆ. ಯಾವುದೇ ಅಗ್ರಿಮೆಂಟ್ ಇಲ್ಲದೇ ಬರೀ ಬಾಯಿ ಮಾತು ನಂಬಿ ಪೂರಿ ಹಾಗೂ ಚಾರ್ಮಿ ಅವರಿಗೆ ಸಹಾಯ ಮಾಡಿದ್ದೆ. ಆದ್ರೆ ಅವ್ರು ಮಾತು ಉಳಿಸಿಕೊಳ್ಳಲಿಲ್ಲ ಎಂದಿದ್ದಾರೆ. ಅವರ ಹಿಂದಿನ ಸಿನಿಮಾಗಳ ಕಾರಣದಿಂದ 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ಬಿಡುಗಡೆ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ನೀವು ನಮಗೆ ಸಹಾಯ ಮಾಡದೇ ಇದ್ದರೆ ಆತ್ಮ*ಹತ್ಯೆ ಒಂದೇ ನಮಗೆ ದಾರಿ ಎಂದು ಅವರಿಬ್ಬರು ಫೋನ್ ಮಾಡಿ ನೋವು ತೋಡಿಕೊಂಡಿದ್ದರು. ಮುಂದೆ ನಾವು ನಿಮಗೆ ಸಿನ್ಮಾ ಮಾಡಿಕೊಡ್ತೀವಿ, ಏನೇ ಆದ್ರು ಜೊತೆಗೆ ನಿಲ್ತೀವಿ ಅಂದ್ರು. ಆದ್ರೆ ಸಿನ್ಮಾ ಸೋತ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಪೂರಿ ಜಗನ್ನಾಥ್ ಫೋನ್ ನಂಬರ್ ಬದಲಿಸಿದ್ದಾರೆ. ಚಾರ್ಮಿ ನನ್ನ ನಂಬರ್ ಬ್ಲಾಕ್ ಮಾಡಿದ್ದಾರೆ. ಇದೇ ಬೇಸರದಿಂದ ನಾನು ಡಿಪ್ರೆಷನ್‌ಗೆ ಹೋಗಿದ್ದೆ ಎಂದು ಚೈತನ್ಯಾ ರೆಡ್ಡಿ ನೋವು ತೋಡಿಕೊಂಡಿದ್ದಾರೆ.

ಪೂರಿ ಜಗನ್ನಾಥ್ ಅಷ್ಟು ದೊಡ್ಡ ನಿರ್ದೇಶಕ. ಕಳೆದುಕೊಂಡಿದ್ದನ್ನು ಮತ್ತೆ ಸಂಪಾದಿಸುವುದಕ್ಕೆ ಆಗಲ್ವಾ? ಯಾಕೆ ಮಾತಿಗೆ ತಪ್ಪಬೇಕು. ಕೊನೆ ಪಕ್ಷ ನಮ್ಮ ಜೊತೆ ಮಾತನಾಡಬೇಕಲ್ಲ. ನಮಗೆ ಅಷ್ಟು ನಷ್ಟವಾದ್ರು ತಲೆ ಕೆಡಿಸಿಕೊಳ್ಳದೇ ಸುಮ್ಮನಾಗಿಬಿಟ್ರು. ಮಾನವೀಯ ಮೌಲ್ಯಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಪೂರಿ ಜಗನ್ನಾಥ್ ವೀಡಿಯೋ ಮಾಡಿ ಮಾತನಾಡುತ್ತಾರೆ. ಅವರಿಗೆ ಮಾನವೀಯತೆ ಇದ್ಯಾ? ಮಾನವೀಯ ಮೌಲ್ಯಗಳು ಅಂದ್ರೆ ಏನು ಅಂತ ಗೊತ್ತಿಲ್ವಾ ? ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ನಮಗೆ ನಮ್ಮ ಮುಂದಿನ ಸಿನಿಮಾಗಳ ಮೇಲೆ ಬಹಳ ನಂಬಿಕೆಯಿದೆ. 'ಹನುಮಾನ್' ಚಿತ್ರ ನಮಗೆ ಯಶಸ್ಸು ತಂದುಕೊಟ್ಟಿದೆ. ಒಳ್ಳೆ ಸಿನಿಮಾ ಮಾಡಲು ನಾವು ಸದಾ ಸಿದ್ಧ. ಲಾಭ-ನಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಈಗ 'ಬಿಲ್ಲ ರಂಗ ಬಾಷ' ಸಿನ್ಮಾ ಮಾಡ್ತಿದ್ದೀವಿ, ಸುದೀಪ್ ಸರ್ ಸೇರಿದಂತೆ ಇಡೀ ತಂಡ ನನ್ನನ್ನು ಯುವರಾಣಿ ತರ ನೋಡಿಕೊಳ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸಿಗದ ಗೌರವ ನನಗೆ ಕನ್ನಡದಲ್ಲಿ ಸಿಕ್ತಿದೆ ಎಂದು Hit tv ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಚೈತನ್ಯಾ ರೆಡ್ಡಿ ಹೇಳಿದ್ದಾರೆ.