ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸ್ತಿದ್ದು ಎರಡು ಭಾಗಗಳಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಸದ್ಯ ಸಿನಿಮಾ ಬಜೆಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.
ಬರೋಬ್ಬರಿ 300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ ಎಂದು ಸುದೀಪ್ ಅಭಿಮಾನಿಗಳು ಚರ್ಚೆ ಹುಟ್ಟಾಕ್ಕಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಚಿತ್ರದ ಬಗ್ಗೆ ನಿರ್ಮಾಪಕಿ ಚೈತನ್ಯಾ ರೆಡ್ಡಿ ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ದೊಡ್ಡ ಬಜೆಟ್ 'ಬಿಲ್ಲ ರಂಗ ಬಾಷ' ಸಿನಿಮಾ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿ ಬಜೆಟ್ 300 ಕೋಟಿ ರೂ. ಎಂದು ಕೆಲವರು ಪೋಸ್ಟ್ ಮಾಡುತ್ತಿದ್ದಾರೆ.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ಹಾಗೂ ಅನೂಪ್ ಮತ್ತೆ ಜೊತೆಯಾಗಿದ್ದಾರೆ. ಮುಂದಿನ 200 ವರ್ಷಗಳ ಭವಿಷ್ಯದ ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಅದಕ್ಕೆ ತಕ್ಕಂತೆ ಭಾರೀ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗ್ತಿದೆ. ಅನೂಪ್ ಹೊಸ ಪ್ರಪಂಚವನ್ನೇ ನಿರ್ಮಾಣ ಮಾಡಿದ್ದಾರೆ. ಅದಕ್ಕಾಗಿ ಭಾರೀ ಹಣ ವ್ಯಯಿಸಲಾಗ್ತಿದೆ. ಇನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಪ್ರೈಂಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಸಿನಿಮಾ ತೆರೆಗೆ ತರ್ತಿದೆ.
ನಿರ್ಮಾಪಕಿ ಚೈತನ್ಯಾ ರೆಡ್ಡಿ ಮಾತನಾಡಿ "ಕನ್ನಡದಲ್ಲಿ ಇಷ್ಟು ಬಜೆಟ್ ನಿಮ್ಗೆ ಹೇಗೆ ವರ್ಕ್ ಆಗುತ್ತೆ, 'ಕೆಜಿಎಫ್' ಮೊದಲ ಭಾಗ ಹಿಟ್ ಆದ್ಮೇಲೆ ಎರಡನೇ ಭಾಗದ ಬಜೆಟ್ ಹೆಚ್ಚಾಯ್ತು, 'ಕಾಂತಾರ'-1 ಬಳಿಕ ಮತ್ತೊಂದು ಭಾಗಕ್ಕೆ ಅಷ್ಟು ಬಜೆಟ್ ಹಾಕಿದ್ರು ಅಂತ ಕೆಲವರು ಕೇಳಿದ್ರು. ಆದ್ರೆ ನಾವು ಕಥೆ ನೋಡಿ ಸಿನ್ಮಾ ಮಾಡ್ತಿದ್ದೀವಿ. ಬ್ಯುಸಿನೆಸ್ ನೋಡ್ತಿಲ್ಲ. ಕಥೆ ಚೆನ್ನಾಗಿದೆ, ಹಾಲಿವುಡ್ ಸ್ಟೈಲ್ ಮೇಕಿಂಗ್ ಮಾಡ್ತಿದ್ದೀವಿ. ಹಾಗಾಗಿ ಬಜೆಟ್ ಜಾಸ್ತಿ ಆಗ್ತಿದೆ. ಇದೇ ಸಿನಿಮಾ ಹಾಲಿವುಡ್‌ನಲ್ಲಿ ಮಾಡಿದ್ರೆ ಬಿಲಿಯನ್ ಡಾಲರ್ ಬೇಕಾಗ್ತಿತ್ತು" ಎಂದು ತಿಳಿಸಿದ್ದರು.
ಚೈತನ್ಯಾ ರೆಡ್ಡಿ 'ಬಿಲ್ಲ ರಂಗ ಬಾಷ' ಸಿನಿಮಾ ಬಜೆಟ್ 300 ಕೋಟಿ ರೂ. ಎಂದು ಹೇಳಿಲ್ಲ. ಆದರೂ ಇಂತಾದೊಂದು ಚರ್ಚೆ ಮುನ್ನಲೆಗೆ ಬಂದಿದೆ. ಇದರಿಂದ ಅನಾವಶ್ಯಕವಾಗಿ ನಿರೀಕ್ಷೆ ಹೆಚ್ಚಾಗುತ್ತದೆ. ಅಲ್ಲದೇ ಸುಳ್ಳು ಸುದ್ದಿ ಹರಡಬೇಡಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ.