ಕನ್ನಡ ಮಾತ್ರವಲ್ಲದೇ ದಕ್ಷಿಣದ 4 ಭಾಷೆಗಳಲ್ಲಿ ಬಿಗ್‌ಬಾಸ್ ಶೋ ನಡೀತಿದೆ. ಮೋಹನ್ ಲಾಲ್ ನೇತೃತ್ವದಲ್ಲಿ ಬಿಗ್‌ಬಾಸ್ ಮಲಯಾಳಂ ಸೀಸನ್ 8 ಮೂಡಿ ಬರ್ತಿದೆ. ವೀಕೆಂಡ್ ಪಂಚಾಯ್ತಿ ವೇಳೆ ಅಚ್ಚರಿ ಅನ್ನಿವೇಶ ಎದುರಾಗಿದೆ. ಸ್ಪರ್ಧಿ ನೇಹಾ ಫಾತಿಮಾ ಪೋಷಕರು ವೇದಿಕೆಗೆ ಬಂದು ಮಗಳನ್ನು ಮರಳಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

ನೇಹಾ ಫಾತಿಮಾ ಸಹಸ್ಪರ್ಧಿ ಸಂತೋಷ್ ರಾಜ್ ಜೊತೆ ಬಹಳ ಆತ್ಮೀಯವಾಗಿ ನಡೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಮಗಳು ತಮ್ಮಿಂದ ದೂರಾಗುತ್ತಿದ್ದಾಳೆ ಎನ್ನುವ ಅರ್ಥದಲ್ಲಿ ನೇಹಾ ಪೋಷಕರು ವೇದಿಕೆಯಲ್ಲಿ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ನೇಹಾ ಫಾತಿಮಾ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಪಡೆದಿದ್ದಾರೆ. ಉತ್ತಮವಾಗಿ ಆಡುತ್ತಿದ್ದಾರೆ.

ಸಂತೋಷ್‌ ರಾಜ್‌ಗೆ ನೇರವಾಗಿ ಪ್ರಪೋಸ್ ಮಾಡದೇ ಇದ್ರು ನೀನು ಅಂದ್ರೆ ಇಷ್ಟ ಎಂದು ಹೇಳಿದ್ದರು. ಇಬ್ಬರ ಬಹಳ ಆಪ್ತ ಮಾತುಕತೆ ಜೋಡಿ ನಡುವೆ ಪ್ರೇಮಾಂಕುರವಾಗಿರುವಂತೆ ಕಂಡು ಬಂದಿತ್ತು. "ಇದರಿಂದ ನನ್ನ ಕುಟುಂಬಕ್ಕೆ ಮುಜುಗರವಾಗುತ್ತದೆ ಅಂತ ನನಗೆ ಚೆನ್ನಾಗಿ ಗೊತ್ತು. ಆದ್ರು ಹೀಗಾಯ್ತು.. ಯಾರನ್ನಾದರೂ ಇಷ್ಟಪಡುವುದು ನನ್ನ ನಿಯಂತ್ರಣದಲ್ಲಿಲ್ಲ. ನೀನಂದ್ರೆ ನನಗಿಷ್ಟ. ಹೊರಗೆ ಹೋದ ಮೇಲೆ ನಮ್ಮಿಬ್ಬರ ಭಾವನೆಗಳು ಹೀಗೆಯೇ ಇದ್ದು, ಎರಡೂ ಕುಟುಂಬಗಳು ಒಪ್ಪಿದ್ರೆ, ಆಗ ನೋಡೋಣ. ನಾನು ನನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಹೋಗಲ್ಲ. ಇಲ್ಲಿ ನಾನು ನಿಮ್ಮಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತೇನೆ" ಎಂದು ನೇಹಾ ಹೇಳಿದ್ರು.. ನೇಹಾ ಮಾತು ಕೇಳಿ ಸಂತೋಷ್(ತಾಶಿ) ಮುಗುಳ್ನಕ್ಕರು, ಮುಖ ನಾಚಿಕೆಯಿಂದ ಕೆಂಪಾಯಿತು. ಬಳಿಕ ಏನಾಯ್ತು ಎನ್ನುವುದು ಶೋನಲ್ಲಿ ಗೊತ್ತಾಗಲಿಲ್ಲ. ಇದೇ ಕಾರಣಕ್ಕೆ ವೀಕೆಂಡ್ ಪಂಚಾಯ್ತಿ ವೇಳೆ ನೇಹಾ ಪೋಷಕರು ವೇದಿಕೆಗೆ ಬಂದಿದ್ದಾರೆ.

ಮೊದಲಿಗೆ ಪೋಷಕರನ್ನು ನೋಡಿ ನೇಹಾ ಖುಷಿಯಾಗಿದ್ದರು. "ನೇಹಾ, ನಿನಗೆ ನಮ್ಮನ್ನು ನೆನಪಿದೆಯಾ? ನಿನಗೆ ನೆನಪಿದೆ ಅಂತ ನಮಗೆ ಅನಿಸುತ್ತಿಲ್ಲ" ಎಂದು ನೇಹಾ ತಂದೆ ಕೇಳಿದ್ದಾರೆ. ನೇಹಾ ಭಾವನಾತ್ಮಕವಾಗಿ ಆಟದಲ್ಲಿ ತೊಡಗಿಸಿಕೊಳ್ಳುತ್ತಿದ್ದಾಳೆ. ಇತರ ಸ್ಪರ್ಧಿಗಳು ಆಕೆಯ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ನೇಹಾ ತಾಯಿ ಹೇಳುತ್ತಾ ಭಾವುಕರಾಗಿದ್ದಾರೆ. ಇದನ್ನು ಕೇಳಿ ಉಳಿದ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ.

ಕೊನೆಗೆ ಮೋಹನ್ ಲಾಲ್ ಮಾತನಾಡಿ "ನಾನು ಒಬ್ಬ ಹೆಣ್ಣು ಮಗುವಿನ ತಂದೆ. ನೇಹಾಳನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಬಂದಿದ್ದಾರೆ" ಎಂದು ಹೇಳಿದ್ದಾರೆ. ಪ್ರೋಮೊ ಸಖತ್ ವೈರಲ್ ಆಗಿ ಚರ್ಚೆ ಹುಟ್ಟಾಕ್ಕಿದೆ.