ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ವೇದಿಕೆ ಸಜ್ಜಾಗಿದೆ. ಮತ್ತೊಮ್ಮೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರ್ತಿದೆ. ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸಾಕಷ್ಟು ವಿಚಾರಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಇದೇ ವೇಳೆ ದೊಡ್ಮನೆ ಒಳಗೆ ನಟ ದರ್ಶನ್ ಅಭಿನಯದ ಸಿನಿಮಾ ಹಾಡುಗಳನ್ನು ಯಾಕೆ ಪ್ಲೇ ಮಾಡುವುದಿಲ್ಲ ಎನ್ನುವ ಪ್ರಶ್ನೆ ಕೂಡ ಕಿಚ್ಚನಿಗೆ ಎದುರಾಗಿತ್ತು.
ಶೋ ಗ್ರ್ಯಾಂಡ್ ಪ್ರೀಮಿಯರ್ ಸೇರಿದಂತೆ ಬಿಗ್‌ಬಾಸ್ ಶೋನಲ್ಲಿ ಸಿನಿಮಾ ಗೀತೆಗಳನ್ನು ಕೇಳಬಹುದು. ಬೆಳಗ್ಗೆ ಸ್ಪರ್ಧಿಗಳು ಎದ್ದು ಹೆಜ್ಜೆ ಹಾಕಲು ಒಂದು ಹಾಡು ಪ್ಲೇ ಮಾಡುತ್ತಾರೆ. ಇದೇ ರೀತಿ ನಾನಾ ಸಂದರ್ಭಗಳಲ್ಲಿ ಹಾಡುಗಳನ್ನು ಬರುತ್ತೆ. ಸುದೀಪ್ ನಟನೆಯ ಸಿನಿಮಾ ಹಾಡುಗಳ ಆರ್ಭಟ ಜೋರಾಗಿ ಇರುತ್ತದೆ. ಒಂದ್ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಬಳಿಕ ದೂರಾಗಿದ್ದರು. ಅವರಿಬ್ಬರೂ ದೂರಾಗುವ ಮುನ್ನ ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡುಗಳು ಪ್ಲೇ ಆಗ್ತಿತ್ತು. ನಂತರ ನಿಂತು ಹೋಗಿತ್ತು. ಇಬ್ಬರ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕಾಪಿರೈಟ್ ಕಾರಣಕ್ಕೆ ದರ್ಶನ್ ಸಿನಿಮಾ ಹಾಡುಗಳನ್ನು ದೊಡ್ಮನೆಯಲ್ಲಿ ಹಾಕಲ್ವಾ? ಎನ್ನುವ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ. "ನೀವು ಮಾತನಾಡುತ್ತಿರುವುದು ಲೀಗಲ್ ಸಂಗತಿ. 'ಟಾಕ್ಸಿಕ್' ವಿಚಾರ. ಬೇಡವಾದ್ದದ್ದು. ನನಗೆ ಪ್ರತಿಯೊಬ್ಬರ ಮೇಲೆ ಪ್ರೀತಿ ಇದೆ ಹೊರತು ದ್ವೇಷ ಇಲ್ಲ. ಹಾಡು ಹಾಕಬಾರದು ಅಂತ ಬಂದಿದ್ರೆ ನೀವಂದುಕೊಂಡಂತೆ ಬೇರೆ ಕಾರಣಗಳು ಇರಬಹುದಲ್ವಾ. ಅಲ್ಲಿಂದಲೇ ಬೆದರಿಕೆ ಪತ್ರಗಳು ಬಂದಿರಬಹುದಲ್ವಾ? ಸಾಂಗ್ ಪ್ಲೇ ಮಾಡಿ ನೋಡಿ ಎಂದು ಹೇಳಿರಬಹುದಲ್ವಾ.? ಯಾರಿಗೂ ಕೆಟ್ಟದ್ದು ಬಯಸಲ್ಲ ನಾವಿಲ್ಲ. ಆ ಕಡೆಯಿಂದ ಎಲ್ರಿಗೂ ಒಳ್ಳೆದು ಬಯಸಲು ಶುರುಮಾಡಿಸಿ.. ಇಂತಹ ಪ್ರಶ್ನೆ ಕೇಳುವುದು ಬಿಡಿ ಎಂದು ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರನ್ನು ಹಾಳು ಮಾಡಲು ಯಾರು ಹುಟ್ಟಿಲ್ಲ. ಯಾರನ್ನೋ ತುಳಿಯಲು ಯಾವ ನನ್ನ ಮಗನ ಕೈಲೂ ಆಗಲ್ಲ. ಸಾಕಷ್ಟು ಜನರ ಹಾಡುಗಳನ್ನು ಹಾಕ್ತಾರೆ. ಕೆಲವರ ಹಾಡು ಹಾಕದೇ ಇರಲು ಬೇರೆ ಕಾರಣಗಳು ಇರಬಹುದು. ನಾವು ಚಿತ್ರರಂಗದಲ್ಲಿ ಎಲ್ಲರನ್ನು ಗೌರವಿಸ್ತೀವಿ ಎಂದು ಸುದೀಪ್ ಹೇಳಿದ್ದಾರೆ. ನಿಮ್ಮ ಆಪ್ತ ಬಳಗದವರು ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳಾಗಿ ಹೋಗ್ತಾರೆ ಎನ್ನುವ ಮಾತಿದೆ ಅದನ್ನು ಒಪ್ತೀರಾ ಎನ್ನುವ ಪ್ರಶ್ನೆಗೆ ಸುದೀಪ್ ತಿರುಗೇಟು ನೀಡಿದ್ದಾರೆ.
ಯಾರು ಆ ರೀತಿ ನನ್ನ ಆಪ್ತರು ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ ಹೇಳಿ ಎಂದು ಸುದೀಪ್ ಮರುಪ್ರಶ್ನೆ ಹಾಕಿದ್ದಾರೆ. ರಾಜೀವ್ ಎಷ್ಟು ವಾರ ಮನೆ ಒಳಗೆ ಇದ್ರು. ಸಿಸಿಎಲ್‌ಗೂ ಮುನ್ನ ಅವ್ರು ಸಿನಿಮಾ ಕಲಾವಿದ್ರು ಅಲ್ವಾ? ವಿನಯ್ ಹಾಗೂ ತ್ರಿವಿಕ್ರಮ್ ನನಗೆ ಪರಿಚಯವಾಗಿದ್ದೇ ಬಿಗ್‌ಬಾಸ್ ಮನೆಯಲ್ಲಿ. ಅದಕ್ಕೂ ಮುನ್ನ ನನಗೆ ಗೊತ್ತಿರಲಿಲ್ಲ. ಸಿಸಿಎಲ್ ಮಾತ್ರ ನನ್ನ ಜೀವನ ಅಲ್ಲ. ಉಗ್ರಂ ಮಂಜು ದೊಡ್ಡ ಕಲಾವಿದ. ಅವ್ರು ಅರ್ಹತೆ ಮೇಲೆ ಬಿಗ್‌ಬಾಸ್ ಮನೆಗೆ ಬಂದವರು. ಇನ್ಯಾರು ನನಗೆ ಪರಿಚಯ ಇರಲಿಲ್ಲ. ನಾನು ಎಥಿಕಲಿ ನನ್ನ ಜೀವನ ನಡೆಸುತ್ತಾ ಬರ್ತಿದ್ದೀನಿ. ನಾನು ಮನಸ್ಸು ಮಾಡಿದ್ರೆ ಯಾರನ್ನು ಬೇಕಾದ್ರು ಮನೆ ಒಳಗೆ ಕಳಿಸಬಹುದು. ಸಾಕಷ್ಟು ಜನ ನನ್ನ ಮೇಲೆ ಈ ಬಗ್ಗೆ ಒತ್ತಡ ಹೇರುತ್ತಾರೆ. ಆದರೆ ನಾನು ಒಪ್ಪುವುದಿಲ್ಲ. ಇಂತಹವರನ್ನು ಮನೆ ಒಳಗೆ ಕಳ್ಸಿ ಎಂದು ನಾನು ಈವರೆಗೆ ಹೇಳಿಲ್ಲ ಎಂದು ಸುದೀಪ್ ವಿವರಿಸಿದ್ದಾರೆ.