ಸದ್ಯ ಬಿಗ್‌ಬಾಸ್ ಮನೆಯಲ್ಲಿ ತಾಂಡವ್ ರಾಮ್ ಹಾಗೂ ಕಿರಣ್ ಶಾಸ್ತ್ರಿ ನಡುವೆ ಕಂದಕ ಏರ್ಪಟ್ಟಿದೆ. ಕಿರಣ್ ಶಾಸ್ತ್ರಿ ಆಟದ ಬಗ್ಗೆ ಗಾನವಿ ಬೇಸರಗೊಂಡಿದ್ದರು. ಅದು ತಪ್ಪಲ್ಲ, ಅದೊಂದು ಮೈಂಡ್ ಗೇಮ್ ಎಂದು ಕಿರಣ್ ಸಮರ್ಥಿಸಿಕೊಂಡಿದ್ದರು. ಇದೇ ವಿಚಾರಕ್ಕೆ ತಾಂಡವ್ ಕೂಡ ಶಾಸ್ತ್ರಿ ವಿರುದ್ಧ ಕೆಂಡಾಮಂಡಲವಾಗಿದ್ದರು. "ಕಳ್ಳ ನೀನು ಎದೆ ಮೇಲೆ ಕಾಲಿಡುತ್ತೀನಿ" ಎಂದು ಕೂಗಾಡಿ ಶಾಸ್ತ್ರಿ ಮೇಲೆ ತಾಂಡವ್ ಗರಂ ಆಗಿದ್ದರು.

ತಾಂಡವ್ ನಡೆ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ರೌಡಿಸಂ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಕರಣವೊಂದರಲ್ಲಿ ತಾಂಡವ್ ಬಂಧನವಾಗಿತ್ತು. ಆ ವಿಚಾರ ಪ್ರಸ್ತಾಪಿಸಿ ಟ್ರೋಲ್ ಮಾಡುತ್ತಿದ್ದಾರೆ. ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ತಾಂಡವ್ ಸಂಕಷ್ಟ ಎದುರಿಸಿದ್ದರು. ಇದನ್ನು ನೆನಪಿಸಿ ಶಾಸ್ತ್ರಿ ಹುಷಾರು ತಾಂಡವ್ ಸರಿಯಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

2024ರಲ್ಲಿ 'ದೇವನಾಂಪ್ರಿಯ' ಚಿತ್ರದ ನಿರ್ದೇಶಕ ಭರತ್ ತಾಂಡವ್ ಲೈಸೆನ್ಸ್ ಹೊಂದಿದ್ದ ಬಂದೂಕಿನಿಂದ ಫೈರಿಂಗ್ ಮಾಡಿದ್ದರು. ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸರಿಂದ ತಾಂಡವ್ ರಾಮ್ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿತ್ತು.

ಜೈಲಿನಿಂದ ಹೊರಬಂದ ಬಳಿಕ ತಾಂಡವ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ದೊಡ್ಮನೆ ಒಳಗೆ ಹೋಗುವ ಮುನ್ನ ಕೂಡ "ಅಪರಾಧಿ ನಿರಪರಾಧಿ ಆಗಿರಬಹುದು ಎಲ್ಲದಕ್ಕೂ ಉತ್ತರ ಕೊಡ್ತೀನಿ" ಎಂದಿದ್ದರು. ಅರೇ ತಾಂಡವ್ ಹೀಗೆ ಹೇಳೊಕೆ ಕಾರಣ ಏನು ಎಂದು ಕೆಲವರು ಚರ್ಚಿಸಿದ್ದರು. ಕೊಲೆಗೆ ಯತ್ನಿಸಿದ ಆರೋಪದಲ್ಲಿ ಜೈಲಿಗೆ ಹೋಗಿದ್ದನ್ನು ತಾಂಡವ್ ನೆನಪಿಸಿ ಈ ಮಾತು ಹೇಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.